ಉತ್ತರಾಖಂಡದಲ್ಲಿ ಉತ್ತರವಿಲ್ಲದ ಪ್ರಶ್ನೆಗಳು
ಅರುಣಾಚಲಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಲು ಹೋಗಿ ಕೈ ಸುಟ್ಟುಕೊಂಡರೂ, ಕೇಂದ್ರ ಸರಕಾರ ಅದರಿಂದ ಪಾಠ ಕಲಿಯಲಿಲ್ಲ. ಕೇಂದ್ರದಲ್ಲಿ ಬಹುಮತವಿದ್ದಾಕ್ಷಣ, ರಾಜ್ಯಗಳ ಚುಕ್ಕಾಣಿಯನ್ನು ರಾಜ್ಯಪಾಲರ ಮೂಲಕ ನಿಯಂತ್ರಿಸಬಹುದು ಎನ್ನುವ ನಂಬಿಕೆಯನ್ನು ಮೋದಿ ಸರಕಾರ ಇನ್ನೂ ಉಳಿಸಿಕೊಂಡಿದೆ. ಇಡೀ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಮಾತ್ರ ‘ಅಚ್ಛೇದಿನ್’ ತರಲು ಸಾಧ್ಯ ಎಂದು ಜನರನ್ನು ಮಂಕುಮರಳು ಮಾಡುತ್ತಿರುವ ಸಂಘಪರಿವಾರ ಮತ್ತು ಬಿಜೆಪಿ, ತನ್ನ ಗುರಿ ಸಾಧನೆಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಳಸಿಕೊಳ್ಳದೆ ಅಡ್ಡದಾರಿಯನ್ನು ಹಿಡಿದಿದೆ. ಈ ಹಿಂದೆ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪ್ರಯೋಗಿಸಿದ ‘ಆಪರೇಶನ್ ಕಮಲ’ವನ್ನು ಉತ್ತರಾಖಂಡದಲ್ಲಿ ಮತ್ತೆ ಕಾರ್ಯರೂಪಕ್ಕೆ ತರಲು ಮೋದಿ ಸರಕಾರ ಹವಣಿಸಿದೆ. ಈ ಹಿನ್ನೆಲೆಯಲ್ಲಿ, ಉತ್ತರಾಖಂಡದ ಕಾಂಗ್ರೆಸ್‌ನೊಳಗಿನ ಭಿನ್ನಮತವನ್ನು ಮುಂದಿಟ್ಟುಕೊಂಡು, ಅಲ್ಲಿನ ಸರಕಾರವನ್ನು ವಜಾಮಾಡಲು ಹೊರಟಿದೆ. ಆದರೆ ಈ ಪ್ರಯತ್ನ ಹೈಕೋರ್ಟ್‌ನಲ್ಲಿ ವಿಫಲವಾಗಿದೆ. ನ್ಯಾಯಾಲಯ ಕೇಂದ್ರ ಸರಕಾರದ ನಿಲುವನ್ನು ಅತ್ಯಂತ ತೀಕ್ಷ್ಣ ರೀತಿಯಲ್ಲಿ ಪ್ರಶ್ನಿಸಿದೆ. ನಾಚಿಕೆಯಿರುವವರಿಗೆ ಆ ನ್ಯಾಯಾಲಯದ ತಪರಾಕಿಯಷ್ಟೇ ಸಾಕಾಗಿತ್ತು. ಆದರೆ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವುದನ್ನು ಸಾಬೀತು ಮಾಡಲು ಕೇಂದ್ರ ಸರಕಾರ ಹೊರಟಂತಿದೆ. ಅಂತೆಯೇ, ಕೇಂದ್ರದ ತನ್ನ ಪ್ರಭಾವವನ್ನು ಮುಂದಿಟ್ಟು ಸುಪ್ರೀಂಕೋರ್ಟ್‌ನಲ್ಲಿ ತಾತ್ಕಾಲಿಕ ಜಯವನ್ನೂ ಪಡೆದಿದೆ. ಉತ್ತರಾಖಂಡ ಹೈಕೋರ್ಟ್ ನೀಡಿದ ತೀರ್ಪಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದು ಅಲ್ಲಿನ ರಾಜಕೀಯ ಗೊಂದಲಗಳನ್ನು ಇನ್ನಷ್ಟು ಬಿಗಡಾಯಿಸಿದೆ. ಈ ತಡೆಯಾಜ್ಞೆಯನ್ನು ಕೇಂದ್ರ ಸರಕಾರ ಹೇಗೆ ತನಗೆ ಪೂರಕವಾಗಿ ಬಳಸಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಸದ್ಯಕ್ಕೆ ಒಂಬತ್ತು ಬಂಡುಕೋರ ಕಾಂಗ್ರೆಸ್ ಶಾಸಕರನ್ನು ಮುಂದಿಟ್ಟುಕೊಂಡು ಬಿಜೆಪಿ ಆಟವಾಡುತ್ತಿದೆ. ಕುದುರೆ ವ್ಯಾಪಾರಕ್ಕೂ ಈ ಸಂದರ್ಭ ಬಳಕೆಯಾಗುತ್ತಿದೆ.
70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಂಡುಕೋರರೇ ನಿರ್ಣಾಯಕರಾಗಿದ್ದಾರೆ. ಒಂಬತ್ತು ಬಂಡುಕೋರರು ಸೇರಿದಂತೆ 36 ಸದಸ್ಯರನ್ನು ಕಾಂಗ್ರೆಸ್ ಹೊಂದಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯೊಳಗೂ ಬಂಡುಕೋರರಿದ್ದಾರೆ ಎನ್ನುವುದು ಗಮನಾರ್ಹವಾಗಿದೆ. ಬಂಡುಕೋರರು ಅನರ್ಹಗೊಂಡರೆ ಸದನದ ಬಲ 61ಕ್ಕೆ ಇಳಿಯಲಿದ್ದು, ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಇತರ ಸಣ್ಣ ಪುಟ್ಟ ಪಕ್ಷವನ್ನು ಬಳಸಿಕೊಂಡು ವಿಶ್ವಾಸಮತವನ್ನು ಗೆಲ್ಲುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಮುಂದಿನ ಬೆಳವಣಿಗೆ ಸುಪ್ರೀಂಕೋರ್ಟ್‌ನ ವಿಚಾರಣೆಯನ್ನೇ ಅವಲಂಬಿಸಿದೆ. ಎ. 27ಕ್ಕೆ ಮುಂದಿನ ವಿಚಾರಣೆ ಇರುವುದರಿಂದ ಅಲ್ಲಿಯವರೆಗೂ ಕಾದು ನೋಡಬೇಕಾಗಿದೆ. ಆದರೆ ಇದೇ ಸಂದರ್ಭದಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆಯೂ ಬಿಕ್ಕಟ್ಟು ತಲೆದೋರಿದೆ. ವಿಶೇಷವೆಂದರೆ, ಹೈಕೋರ್ಟ್ ಈ ನಿಟ್ಟಿನಲ್ಲಿ ತೀವ್ರ ಮತ್ತು ಸ್ಪಷ್ಟ ಸ್ವರದಲ್ಲಿ ಮಾತನಾಡಿತ್ತು. ತಪ್ಪು ರಾಷ್ಟ್ರಪತಿಯಿಂದಲೂ ಸಂಭವಿಸಬಹುದು ಎಂದು ಹೇಳುವ ಮೂಲಕ, ತಪ್ಪನ್ನು ತಿದ್ದುವುದು, ಸರಿಪಡಿಸುವುದು ತನ್ನ ಕರ್ತವ್ಯ ಎಂದೂ ಹೇಳಿತ್ತು. ಹಾಗೆಯೇ ಕೇಂದ್ರದ ವರ್ತನೆಯಿಂದ ತನಗೆ ನೋವಾಗಿದೆ ಎಂದು ಹೇಳಿತ್ತು. ಇದೊಂದು ರೀತಿಯಲ್ಲಿ ಕೇಂದ್ರಕ್ಕಾಗಿರುವ ಮುಖಭಂಗವೇ ಸರಿ. ಇದೇ ಸಂದರ್ಭದಲ್ಲಿ, ಕೇಂದ್ರ ಸರಕಾರ ತನಗಾಗಿರುವ ಮುಖಭಂಗವನ್ನು ಮರೆಮಾಚಿದ್ದು, ರಾಷ್ಟ್ರಪತಿಯ ವಿರುದ್ಧ ನ್ಯಾಯಾಲಯ ಬಳಸಿರುವ ಭಾಷೆಗೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ‘‘ರಾಷ್ಟ್ರಪತಿಯ ವಿರುದ್ಧ ಹೈಕೋರ್ಟ್ ಅಂತಹ ಭಾಷೆಯನ್ನು ಉಪಯೋಗಿಸಬಾರದಿತ್ತು. ಸ್ವಾತಂತ್ರಾನಂತರ ಯಾವುದೇ ಸಂಸ್ಥೆಯೂ ರಾಷ್ಟ್ರಪತಿಯ ವಿರುದ್ಧ ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿರಲಿಲ್ಲ’’ ಎಂದು ಬಿಜೆಪಿ ಹೇಳಿಕೊಂಡಿದೆ. ‘‘ನಮ್ಮ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಪತಿಯ ಹುದ್ದೆ ಸರ್ವೋನ್ನತವಾದುದು. ಅಂತಹ ಟೀಕೆಗಳು ದೇಶದಲ್ಲಿ ಅನಗತ್ಯ ಚರ್ಚೆಯನ್ನು ಪ್ರಚೋದಿಸುತ್ತದೆ’’ ಎಂದೂ ಬಿಜೆಪಿ ಆತಂಕವ್ಯಕ್ತಪಡಿಸಿದೆ. ಆದರೆ, ರಾಷ್ಟ್ರಪತಿಯ ಮೇಲಿನ ಈ ಟೀಕೆಗೆ ಪರೋಕ್ಷವಾಗಿ ಕೇಂದ್ರ ಸರಕಾರವೇ ಕಾರಣ ಎನ್ನುವುದನ್ನು ಬಿಜೆಪಿ ಮರೆತು ಬಿಟ್ಟಿದೆ. ರಾಷ್ಟ್ರಪತಿಯೂ ತಪ್ಪು ಮಾಡಬಹುದು ಎನ್ನುವ ನ್ಯಾಯಾಲಯದ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಈ ಹಿಂದೆ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ, ಅದಕ್ಕೆ ಸಹಿ ಹಾಕಿದವರೂ ರಾಷ್ಟ್ರಪತಿಯೇ ಆಗಿದ್ದಾರೆ. ಅವರು ನೇರವಾಗಿ ತಪ್ಪಿನಲ್ಲಿ ಭಾಗಿಯಾಗದೇ ಇದ್ದರೂ, ಸರಕಾರ ರಾಷ್ಟ್ರಪತಿಯನ್ನು ದುರ್ಬಳಕೆ ಮಾಡುತ್ತಾ ಬಂದಿರುವುದು ಇಂದು ನಿನ್ನೆಯ ವಿಷಯವಲ್ಲ. ಆದುದರಿಂದಲೇ ರಾಷ್ಟ್ರಪತಿಗೆ ‘ರಬ್ಬರ್ ಸ್ಟಾಂಪ್’ ಎಂಬ ವ್ಯಂಗ್ಯನಾಮವೂ ಇದೆ. ಉತ್ತರಾಖಂಡದ ಇಂದಿನ ಸ್ಥಿತಿಗೆ ರಾಷ್ಟ್ರಪತಿಯ ಪಾಲೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಥವಾ ಕೇಂದ್ರ ಸರಕಾರ ರಾಷ್ಟ್ರಪತಿಯನ್ನು ಕೈಗೊಂಬೆ ಮಾಡಿಕೊಂಡು ತನ್ನ ಉದ್ದೇಶವನ್ನು ಸಾಧಿಸಿಕೊಂಡಿದೆ. ಪ್ರಜಾಸತ್ತೆಯ ಸರ್ವೋನ್ನತ ನಾಯಕ ರಾಷ್ಟ್ರಪತಿಯೇ ಆಗಿರಬಹುದು. ಆದರೆ ಯಾವುದೇ ಸರಕಾರ ದುರ್ಬಲಗೊಂಡಾಕ್ಷಣ ಅಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದು, ಅಥವಾ ಒಂದು ಪ್ರಜಾಸತ್ತಾತ್ಮಕ ಸರಕಾರವನ್ನು ದುರ್ಬಲಗೊಳಿಸಿ ಅಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದು ಪ್ರಜಾಸತ್ತೆಗೆ ಶೋಭಿಸುವಂತಹದ್ದೇ? ಪ್ರಜಾಸತ್ತೆಯ ಮೇಲೆ ಮತ್ತು ರಾಷ್ಟ್ರಪತಿಯ ಮೇಲೆ ಗೌರವವಿದ್ದಿದ್ದರೆ ಕೇಂದ್ರ ಸರಕಾರ ಉತ್ತರಾಖಂಡದಲ್ಲಿ ಇಂತಹದೊಂದು ಸನ್ನಿವೇಶವನ್ನು ನಿರ್ಮಾಣ ಮಾಡುತ್ತಿರಲಿಲ್ಲ.
ಅದೇನೇ ಇರಲಿ. ಈ ಹಿಂದಿನ ಯಾವ ಸರಕಾರಗಳೂ ಇಷ್ಟೊಂದು ಅವಸರದಲ್ಲಿ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಡಳಿತ ಹೇರಿದ ಉದಾಹರಣೆಯಿಲ್ಲ. ಮೋದಿ ಸರಕಾರ, ಅಡ್ಡದಾರಿಯ ಮೂಲಕ ರಾಜ್ಯಗಳ ಮೇಲೆ ತನ್ನ ನಿಯಂತ್ರಣವನ್ನು ಹೇರಲು ಪ್ರಯತ್ನಿಸುತ್ತಿದೆ. ಇದು ಅಕ್ಷಮ್ಯವಾಗಿದೆ. ಬೇರೆ ಸರಕಾರ ರಚನೆಗೆ ಮೊದಲು ಇರುವ ಸರಕಾರಕ್ಕೆ ಬಲಾಬಲ ಪರೀಕ್ಷೆ ನಡೆಸಲು ಅವಕಾಶ ನೀಡುವುದು ಸದ್ಯದ ಸಂದರ್ಭದಲ್ಲಿ ಉತ್ತಮ ನಿಲುವಾಗಿದೆ. ಹಾಗೆಯೇ ರಾಜ್ಯಪಾಲರನ್ನು ಬಳಸಿಕೊಂಡು, ವಿವಿಧ ರಾಜ್ಯಗಳ ವ್ಯವಹಾರದಲ್ಲಿ ಮೂಗುತೂರಿಸಲು ಯತ್ನಿಸುವುದೂ ರಾಜ್ಯ-ಕೇಂದ್ರಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಬಹುದು. ಇಂತಹ ತಿಕ್ಕಾಟ ಅಂತಿಮವಾಗಿ ಒಕ್ಕೂಟ ವ್ಯವಸ್ಥೆಯ ಮೇಲೆಯೇ ದುಷ್ಪರಿಣಾಮ ಬೀರಬಹುದು. ಈ ಎಚ್ಚರಿಕೆ ಕೇಂದ್ರ ಸರಕಾರದ ನೇತೃತ್ವ ವಹಿಸಿದವರಿಗಿರಬೇಕು.