ಒಂದರ ಹಿಂದೊಂದರಂತೆ ಚಿನ್ನದ ಬಿಸ್ಕತ್ ಭೇದಿ ಮಾಡಿಸಿದ ಕಸ್ಟಮ್ಸ್ ಅಧಿಕಾರಿಗಳು!

Update: 2016-04-23 03:10 GMT

ಕೊಲ್ಕತ್ತಾ, ಎ.23: ಇಲ್ಲಿನ ಡಂ ಡಂ ನೇತಾಜಿ ಸುಭಾಸ್‌ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಾಂಗ್ಲಾದೇಶಿ ಪ್ರಜೆಯೊಬ್ಬರಿಂದ ಒಂದರ ಹಿಂದೊಂದರಂತೆ ಚಿನ್ನದ ಬಿಸ್ಕತ್‌ಗಳನ್ನು ಭೇದಿ ಮಾಡಿಸಿ 35 ಲಕ್ಷ ರೂಪಾಯಿ ಮೌಲ್ಯದ ಕಳ್ಳಸಾಗಾಣಿಕೆ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಗುರುವಾರ ಮಧ್ಯರಾತ್ರಿ ಏರ್ ಏಷ್ಯಾ ವಿಮಾನದಲ್ಲಿ ಬಂದಿಳಿದ ಮುಶೀರ್ ಅಹ್ಮದ್, ವಾಯುಯಾನ ವಿಕ್ಷಣಾ ಘಟಕದ ಇಮಿಗ್ರೇಷನ್ ಪ್ರಕ್ರಿಯೆಯನ್ನು ಮುಗಿಸಿ ತಮ್ಮ ಚೆಕ್ ಇನ್ ಆದ ಲಗೇಜ್‌ಗಳನ್ನು ಪಡೆಯಲು ಕಾಯುತ್ತಿದ್ದರು.

"ಈ ಸಂದರ್ಭದಲ್ಲಿ ಆತ ಉದ್ವಿಗ್ನವಾಗಿರುವುದು ಕಂಡುಬಂತು. ಆತನನ್ನು ವಶಕ್ಕೆ ಪಡೆದುಕೊಂಡು ತನಿಖೆಗೆ ಒಳಪಡಿಸಿದೆವು. ಎಲ್ಲೋ ಏನೋ ತಪ್ಪಾಗಿದೆ ಎಂಬ ಅನುಮಾನ ಬಂತು. ಆತನನ್ನು ಬಂಧನ ಕೊಠಡಿಗೆ ಪಡೆದುಕೊಂಡು ಲೋಹಶೋಧಕ ಯಂತ್ರದ ತಪಾಸಣೆಗೆ ಒಳಪಡಿಸಿದೆವು. ಆತನ ಹೊಟ್ಟೆಯೊಳಗೆ ಕೆಲ ಲೋಹ ಇರುವುದು ಪತ್ತೆಯಾಯಿತು. ಆದರೆ ಆತ ಮಾತ್ರ ನಿಮ್ಮ ಯಂತ್ರದಲ್ಲೇ ದೋಷವಿದೆ ಎಂದು ಹೇಳುತ್ತಿದ್ದ. ಮುಂದಿನ ಮೂರರಿಂದ ನಾಲ್ಕು ಗಂಟೆ ಕಾಲ ಆತನಿಗೆ ವಿರೇಚಕ ಔಷಧ ನೀಡಿ ನಿರಂತರವಾಗಿ ನೀರು ಸೇವಿಸುವಂತೆ ಸೂಚಿಸಿದೆವು. ಅಂತಿಮವಾಗಿ ಆತನ ಭೇದಿಯಲ್ಲಿ ಒಂದರ ಮೇಲೊಂದರಂತೆ ಚಿನ್ನದ ಬಿಸ್ಕತ್ತುಗಳು ದೊರಕಿದವು" ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪ್ರತಿ ಬಿಸ್ಕತ್‌ಗಳು 100 ಗ್ರಾಂ ತೂಕದ್ದಾಗಿದ್ದು, 1.1 ಕೆ.ಜಿ. ಚಿನ್ನ ವಶಪಡಿಸಿಕೊಳ್ಳಲಾಯಿತು. ಇದರ ಮಾರುಕಟ್ಟೆ ಮೌಲ್ಯ 35.52 ಲಕ್ಷ ರೂಪಾಯಿಗಳು ಎಂದು ವಿವರಿಸಿದ್ದಾರೆ.

ಕೌಲಾಲಂಪುರದಿಂದ ನಗರಕ್ಕೆ ಕಳ್ಳಸಾಗಾಣಿಕೆ ಮಾಡುತ್ತಿದ್ದ ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ. ಕೇಂದ್ರ ಕೊಲ್ಕತ್ತಾದ ಮಾರ್ಕ್ಯೂಸ್ ಸ್ಟ್ರೀಟ್‌ನ ಹೋಟೆಲ್‌ನಲ್ಲಿ ಆತ ತಂಗಲು ನಿರ್ಧರಿಸಿದ್ದ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News