ಪಠಾಣ್‌ಕೋಟ್ ನ ನಾಲ್ಕು ಕಾಲಿನ ವೀರನಿಗೆ ಪ್ರಶಸ್ತಿಯ ಗರಿ

Update: 2016-04-23 03:24 GMT

ಹೊಸದಿಲ್ಲಿ, ಎ. 23: ಕರ್ತವ್ಯದಲ್ಲಿದ್ದಾಗ ಅಸು ನೀಗಿದ ಉತ್ತರಾಖಂಡ ಪೊಲೀಸ್ ವಿಭಾಗದ ಕುದುರೆ ಶಕ್ತಿಮಾನ್‌ಗೆ ಇಡೀ ದೇಶ ಕಂಬನಿ ಮಿಡಿದಿದೆ. ಆದರೆ ಇನ್ನೊಂದು ನಾಲ್ಕು ಕಾಲಿನ ರಾಜನ ಕಥೆ ಇದಕ್ಕಿಂತ ಸ್ವಲ್ಪ ಭಿನ್ನ. ಶಕ್ತಿಮಾನ್ ಕಥೆ ದುಃಖಾಂತ್ಯವಾದರೆ, ಈ ರಾಕೆಟ್ ರಾಜನ ಕಥೆ ಸುಖಾಂತ್ಯವಾಗಿದೆ.

ಪಠಾಣ್‌ಕೋಟ್ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಉಗ್ರರ ಪ್ರಮುಖ ಸುಳಿವು ನೀಡಿ, ತೀವ್ರವಾಗಿ ಗಾಯಗೊಂಡಿದ್ದ ರಾಕೆಟ್ ಹೆಸರಿನ ಈ ಶ್ವಾನ ಇದೀಗ ಕರ್ತವ್ಯಕ್ಕೆ ಮರಳಿದೆ. ಅಷ್ಟು ಮಾತ್ರವಲ್ಲ; ಈ ರಾಜನ ಹೆಸರನ್ನು ಪ್ರಶಸ್ತಿಗೂ ಶಿಫಾರಸು ಮಾಡಲಾಗಿದೆ. ರಾಷ್ಟ್ರೀಯ ಭದ್ರತಾ ಪಡೆಯ ಕೆ-9 ಘಟಕದ ಈ ತಜ್ಞನನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಬೆಲ್ಜಿಯಂ ಮೆಲಿನೋಸ್ ಪ್ರಭೇದಕ್ಕೆ ಸೇರಿದ ಈ ಶ್ವಾನ, ಎನ್‌ಎಸ್‌ಜಿನಲ್ಲೇ ಹುಟ್ಟಿ ಬೆಳೆದದ್ದು. ಜನವರಿ 4ರಂದು ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಕೆಲ ಕಟ್ಟಡಗಳಿಗೆ ಬೆಂಕಿ ಆವರಿಸಿಕೊಂಡಿದ್ದಾಗ, ಒಬ್ಬ ದಾಳಿಕೋರ ಅಲ್ಲಿ ಇರುವ ಸುಳಿವನ್ನು ಈ ಶ್ವಾನ ಪತ್ತೆ ಮಾಡಿತ್ತು. ಮಾನವನ ಇರುವಿಕೆ, ಸ್ಫೋಟಕ ಹಾಗೂ ಸುಧಾರಿತ ಸ್ಫೋಟಕ ಸಾಧನಗಳನ್ನು ಪತ್ತೆ ಮಾಡುವಲ್ಲಿ ಇದು ಚತುರ ಶ್ವಾನ. ಎನ್‌ಎಸ್‌ಜಿಯ ಈ ಪತ್ತೆದಾರಿ ದಳದಲ್ಲಿ ಈತನ ಜತೆಗೆ 300 ಬ್ಲ್ಯಾಕ್‌ಕ್ಯಾಟ್ ಕಮಾಂಡೊಗಳು ಮತ್ತು ಇತರ ತಳಿಯ ಹಲವು ಶ್ವಾನಗಳೂ ಇವೆ. ಬೆಲ್ಜಿಯನ್ ಮೆಲಿನಿಯಾಸ್ ಶ್ವಾನಗಳು ಅತ್ಯಂತ ಬುದ್ಧಿಮತ್ತೆ ಹೊಂದಿದ್ದು ಹಿಂದೆ ಒಸಾಮಾ ಬಿನ್ ಲಾಡೆನ್ ಇರುವಿಕೆಯ ಸುಳಿವು ನೀಡುವಲ್ಲೂ ಇದೇ ತಳಿಯ ಶ್ವಾನ ಮಹತ್ವದ ಪಾತ್ರ ವಹಿಸಿತ್ತು.

ಇದೀಗ ಪಠಾಣ್‌ಕೋಟ್ ದಾಳಿಕೋರರ ಜಾಡುಹಿಡಿದ ಎರಡೂವರೆ ವರ್ಷದ "ರಾಕೆಟ್" ಹೆಸರನ್ನು ಶೌರ್ಯಪ್ರಶಸ್ತಿಗೆ ಶಿಫಾರಸು ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News