×
Ad

ನಮ್ಮನ್ನು 'ಕೇರೇ' ಮಾಡದ ಅನುಪಮ್ , ಅವರಿಂದ ನಮಗೆ ನಷ್ಟವೇ ಆಗಿದೆ

Update: 2016-04-23 11:49 IST

ಹೊಸದಿಲ್ಲಿ, ಎ. 23: ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಆರು ಮಂದಿಯ ಹೆಸರನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಆರಿಸಿರುವ ಬಿಜೆಪಿ, ಉಳಿದಿರುವ ಇನ್ನೊಂದು ಸ್ಥಾನಕ್ಕೆತನ್ನ ‘ಕಟ್ಟಾ ಬೆಂಬಲಿಗ’ ಹಾಗೂ ನಟ ಅನುಪಮ್ ಖೇರ್ ಅವರ ಹೆಸರನ್ನು ಸೂಚಿಸಲು ಇನ್ನಿಲ್ಲದ ಉತ್ಸಾಹ ತೋರಿದೆ. ಆದರೆ ಇದು ಕಾಶ್ಮೀರ ಕಣಿವೆಯಲ್ಲಿ ವಾಸಿಸುವ  ಅಥವಾ ಹೊರಗಿರುವ ಕಾಶ್ಮೀರಿ ಪಂಡಿತರಿಗೆ ಅಷ್ಟೊಂದು ಸರಿ ಕಂಡಿಲ್ಲ.

ಉತ್ತಮ ಪೋಷಕ ನಟರೆಂಬ ಖ್ಯಾತಿಗೆ ಪಾತ್ರರಾಗಿರುವ ಖೇರ್ ಇತ್ತೀಚೆಗೆ ಅಸಹಿಷ್ಣುತೆ ವಿವಾದದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಭಾರತ್ ಮಾತಾ ಕಿ ಜೈ ಘೋಷಣೆ ವಿವಾದ ಸಂಬಂಧವೂ ಪಕ್ಷದ ಪರವಾಗಿ ನಿಂತಿದ್ದು ಹಾಗೂ ಘೋಷಣೆ ಕೂಗುವುದು ದೇಶಪ್ರೇಮದ ದ್ಯೋತಕವೆಂಬುದನ್ನೂ ಒಪ್ಪಿಕೊಂಡಿದ್ದಾರೆ.

ಶ್ರೀನಗರದಲ್ಲಿ ವಾಸಿಸುವ ಕಾಶ್ಮಿರಿ ಪಂಡಿತ್ ಸಂಘರ್ಷ ಸಮಿತಿಯ ಅಧ್ಯಕ್ಷ ಸಂಜಯ್ ಟಿಕ್ಕೂ ಪ್ರಕಾರ ಇದು ಅತ್ಯಂತ ಕೆಟ್ಟ ಮಹತ್ವಾಕಾಂಕ್ಷೆಯ ರಾಜಕೀಯವೆಂದಿದ್ದಾರೆ. ‘‘ಖೇರ್ ಇದಕ್ಕೆ ಅರ್ಹರಲ್ಲ. ಅವರು ತಮ್ಮ ಸಮುದಾಯಕ್ಕೇನು ಮಾಡಿದ್ದಾರೆ? ಕಾಶ್ಮೀರ ಪಂಡಿತ ಸಮುದಾಯಕ್ಕಾಗಿ ಬಹಳವಾಗಿ ದುಡಿದಿರುವ ಅನೇಕರಿದ್ದಾರೆ,’’ ಎಂದು ಅವರು ಹೇಳಿದ್ದಾರೆ.

‘‘ಕಾಶ್ಮೀರ ಕಣಿವೆಯಲ್ಲಿ ಸುಮಾರು 6,000 ದಿಂದ 7,000 ಹಿಂದೂಗಳಿದ್ದಾರೆ. ಖೇರ್ ಅವರ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸುತ್ತಾರೆ? ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿಯದವರು ದೇಶಪ್ರೇಮಿಗಳಲ್ಲವೆಂದು ಅವರು ಹೇಗೆ ಹೇಳುತ್ತಾರೆ?’’ ಎಂದು ಟಿಕ್ಕೂ ಪ್ರಶ್ನಿಸುತ್ತಾರೆ.

ತೊಂಬತ್ತರ ದಶಕದಲ್ಲಿ ಕಾಶ್ಮೀರ ತೊರೆದಿರುವ ಖ್ಯಾತ ವಕೀಲ ಅಶೋಕ್ ಬನ್ಪ್ರಕಾರ ಖೇರ್ ಪತ್ನಿ ಈಗಾಗಲೇ ಸಂಸತ್ ಸದಸ್ಯೆಯಾಗಿರುವುದರಿಂದ ಹಾಗೂ ಪದ್ಮ ಪ್ರಶಸ್ತಿ ಪಡೆದಿರುವುದರಿಂದ ಖೇರ್ ರಾಜ್ಯ ಸಭಾ ಸದಸ್ಯರಾಗುವ ಸಾಧ್ಯತೆ ಕಡಿಮೆ.

ಖೇರ್ ಅವರಿಗೆ ಆತ್ಮಗೌರವವೇನಾದರೂ ಇದ್ದರೆ ಅವರು ರಾಜ್ಯಸಭಾ ಸದಸ್ಯತ್ವವನ್ನು ನಿರಾಕರಿಸಬೇಕು, ಎಂದು ಖ್ಯಾತ ರಂಗಕರ್ಮಿ ಎಂ ಕೆ ರೈನಾ ಹೇಳುತ್ತಾರೆ. ‘‘ಕೃಷ್ಣ ಸೊಬ್ತಿಯಂತಹ 90 ವರ್ಷದ ಖ್ಯಾತನಾಮರು ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದಾಗ ಖೇರ್ ಅವರನ್ನು ಅಪಹಾಸ್ಯ ಮಾಡಿದರು,’’ಎಂದು ರೈನಾ ಖೇದ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರಿ ಸಮಿತಿಯ ಮಾಜಿ ಅಧ್ಯಕ್ಷ ಸುನಿಲ್ ಶಕ್ಧರ್ ಮಾತ್ರ ಖೇರ್ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಾರೆ. ಖೇರ್ ಕಾಶ್ಮಿರಿ ಪಂಡಿತರ ಪರವಾಗಿ ರಾಜ್ಯಸಭೆಯಲ್ಲಿ ದನಿಯೆತ್ತುತ್ತಾರೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News