×
Ad

ರಾಜ್ಯಸಭಾ ಸ್ಥಾನಕ್ಕೆ ಪಟ್ಟು ಹಿಡಿದ ಖೇರ್ ಬಗ್ಗೆ ಬಿಜೆಪಿಯೊಳಗೆ ಭುಗಿಲೆದ್ದ ಅಸಮಾಧಾನ

Update: 2016-04-24 19:59 IST

ಹೊಸದಿಲ್ಲಿ, ಎ. 24: ರಾಜ್ಯಸಭೆಯ ನಾಮನಿರ್ದೇಶನಕ್ಕಾಗಿ ಪಟ್ಟು ಹಿಡಿದು ಸರಕಾರದ ಮೇಲೆ ಒತ್ತಡ ಹೇರಲು ನಿರಂತರ ಪ್ರಯತ್ನ ನಡೆಸುತ್ತಿರುವ ನಟ, ಪ್ರಧಾನಿ ಮೋದಿ ಅವರ ಕಟ್ಟಾ ಬೆಂಬಲಿಗ ಅನುಪಮ್ ಖೇರ್ ಅವರ ವಿರುದ್ಧ ಬಿಜೆಪಿಯೊಳಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಈ ಹಿಂದೆ ಸರಕಾರದ ವತಿಯಿಂದ ಕೆಲವು ಜವಾಬ್ದಾರಿಗಳನ್ನು ನೀಡುವಾಗ ನನಗೆ ಸಮಯ ಸಾಲದು ಎಂಬ ನೆಪ ಹೇಳಿ ಖೇರ್ ಜಾರಿಕೊಂಡಿದ್ದರು. ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ನಿರ್ದೇಶಕ ಸ್ಥಾನ ಹಾಗೂ ನ್ಯಾಶನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್ ನಿರ್ದೇಶಕ ಸ್ಥಾನಗಳನ್ನು ಖೇರ್ ಇದೇ ಕಾರಣ ನೀಡಿ ನಿರಾಕರಿಸಿದ್ದರು. "ಆಗ ಪುರುಸೊತ್ತಿಲ್ಲದ ಖೇರ್ ಈಗ ರಾಜ್ಯಸಭಾ ಸದಸ್ಯನಾಗಲು ಹೇಗೆ ಬಿಡುವು ಮಾಡಿಕೊಂಡರು"  ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. 
" ನಾವು ದಂಪತಿಯನ್ನು ಸಂಸತ್ತಿಗೆ ಕಳಿಸುವ ಸಂಪ್ರದಾಯವಿಲ್ಲ " ಎಂದು ಬಿಜೆಪಿಯ ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ. ಖೇರ್ ರ ಪತ್ನಿ ಕಿರಣ್ ಖೇರ್ ಲೋಕಸಭಾ ಸದಸ್ಯರಾಗಿದ್ದಾರೆ. 
ಅನುಪಮ್ ಖೇರ್ ಕಾಶ್ಮೀರ ಪಂಡಿತರ ನಾಯಕನೆಂದು ಬಿಂಬಿಸಿಕೊಂಡು ವಿವಾದ ಉಂಟು ಮಾಡುತ್ತಿರುವುದು ಬಿಜೆಪಿಗೆ ಕಿರಿಕಿರಿ ಉಂಟು ಮಾಡಿದೆ. ಇತ್ತೀಚೆಗೆ ಎನ್ ಐ ಟಿ ವಿವಾದದ ಸಂದರ್ಭದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಲು ಹೋಗಿ ಖೇರ್ ಬಿಜೆಪಿ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದರು. 
" ಯಾವುದೇ ವಿಷಯವನ್ನು ಉದ್ದ ಎಳೆಯಬಾರದು. ಅದನ್ನು ಒಂದು ಹಂತದಲ್ಲಿ ಮುಗಿಸಬೇಕು " ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದ್ದಾರೆ. 
ಈಗಾಗಲೇ ಆರು ಮಂದಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಏಳನೇ ಸ್ಥಾನಕ್ಕೆ ಪತ್ರಕರ್ತ ರಜತ್ ಶರ್ಮ ಆಯ್ಕೆ ಬಹುತೇಕ ಖಚಿತವಾಗಿದೆ . ಅವರು ಮೊದಲ ಆರರ ಪಟ್ಟಿಯಲ್ಲಿ ಹೆಸರು ಮಿಸ್ಸಾಗಿದ್ದಕ್ಕೆ ಬಿಜೆಪಿ ವರಿಷ್ಠರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News