ಕೇಂದ್ರ ಸರಕಾರದ ಯೋಜನೆಗಳಿಗೆ ಪ್ರಧಾನಮಂತ್ರಿಯ ಹೆಸರು
ಹೊಸದಿಲ್ಲಿ, ಎ.24: ಎಲ್ಲ ಕೇಂದ್ರ ಸರಕಾರದ ಯೋಜನೆಗಳಿಗಿನ್ನು ‘ಪ್ರಧಾನ ಮಂತ್ರಿ’ ಅಥವಾ ರಾಷ್ಟ್ರೀಯ ನಾಯಕರ ಹೆಸರುಗಳು ಪೂರ್ವ ಪ್ರತ್ಯಯವಾಗಿ ಬರುವ ಸಂಭವವಿದೆ. ಪ್ರತಿ ಚಲನ ಚಿತ್ರ ಮಂದಿರಗಳಲ್ಲಿ ಚಿತ್ರದ ಪ್ರಸಾರಕ್ಕೆ ಮೊದಲು ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನು ಬಿಂಬಿಸುವ ಚಿತ್ರಗಳನ್ನು ತೋರಿಸುವ ಸಾಧ್ಯತೆಯಿದೆ.
ಇವು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕೇಂದ್ರ ಸರಕಾರದ ಯೋಜನೆಗಳು ಹಾಗೂ ಸಾಧನೆಗಳನ್ನು ಹೆಚ್ಚು ಹೆಚ್ಚು ತೋರಿಸುವ ಮಾರ್ಗೋಪಾಯಗಳ ಕುರಿತು ಸಲಹೆ ನೀಡಲು ರಚಿಸಲಾಗಿರುವ ಸಚಿವರ ಗುಂಪಿನ ಸಲಹೆಗಳಲ್ಲಿ ಸೇರಿವೆ.
ಹಿಂದಿನ ಹಾಗೂ ಇಂದಿನ ವ್ಯತ್ಯಾಸವನ್ನು ಮನೋರಂಜನೀಯವಾಗಿ ಬಿಂಬಿಸಿ ಸರಕಾರದ ಸಾಧನೆಗಳ ಅನಿಮೇಶನ್ ಕ್ಲಿಪ್‌ಗಳನ್ನು ನಿರ್ಮಿಸುವ ಸಲಹೆಯನ್ನೂ ಸಂಸದೀಯ ವ್ಯವಹಾರ ಸಚಿವ ಎಂ.ವೆಂಕಯ್ಯ ನಾಯ್ಡು ನೇತೃತ್ವದ ಸಚಿವರ ಗುಂಪಿನ ಸಭೆಯೊಂದರಲ್ಲಿ ಆವರ್ತಿಸಲಾಗಿರುವ ಆಂತರಿಕ ಟಿಪ್ಪಣಿಯೊಂದು ಶಿಫಾರಸು ಮಾಡಿದೆ. ಇದರ ಜಾರಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಯೋಗಕ್ಕೂ ಅದು ಸಲಹೆ ನೀಡಿದೆ.
ಸರಕಾರದ ಸಾಧನೆಗಳನ್ನು ತೋರಿಸುವ ಚಿತ್ರವೊಂದನ್ನು ಪ್ರತಿ ಎರಡು ವಾರಗಳಿಗೊಂದರಂತೆ ಸಿದ್ಧಪಡಿಸಬೇಕು. ಅದನ್ನು ಚಲನಚಿತ್ರ ಆರಂಭಕ್ಕೆ ಮುಂಚೆ ಪ್ರತಿ ಚಿತ್ರಮಂದಿರದಲ್ಲಿ ತೋರಿಸಬೇಕು. ಅದಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಕಾರ ಪಡೆಯಬೇಕೆಂದು ಸಚಿವರ ಗುಂಪು ಶಿಫಾರಸು ಮಾಡಿದೆ.
ರಾಜ್ಯ ಸರಕಾರಗಳು ಕೇಂದ್ರೀಯ ಯೋಜನೆಗಳ ಶ್ರೇಯವನ್ನು ಆಗಾಗ ಪಡೆಯುತ್ತಿವೆಯೆಂಬ ಆರೋಪದ ಹಿನ್ನೆಲೆಯಲ್ಲಿ, ಕೇಂದ್ರದ ಯೋಜನೆಗಳ ಉದ್ಘಾಟನೆಯನ್ನು ಕೇಂದ್ರ ಸಚಿವರು ಹಾಗೂ ಸಂಸದರ ಉಪಸ್ಥಿತಿಯಲ್ಲಿ ನಡೆಸುವ ಮೂಲಕ ಕೇಂದ್ರದ ಪಾತ್ರದ ಮೇಲೆ ಬೆಳಕು ಚೆಲ್ಲಬೇಕು. ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸುವ ಸಾಂವಿಧಾನಿಕ ಅಧಿಕಾರವನ್ನು ಸಂಸದರಿಗೆ ನೀಡಬೇಕು. ಯೋಜನೆಯೊಂದರ ಜಾರಿಯಲ್ಲಿ ಸಾಮರ್ಥ್ಯದಲ್ಲಿ ಲೋಪ ಉಂಟಾಗಿದೆಯೆಂದು ಕಂಡು ಬಂದಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಬಹುದಾದ ದಂಡದ ವ್ಯವಸ್ಥೆಯೊಂದರ ಬೇಕೆಂದೂ ಅದು ಸಲಹೆ ನೀಡಿದೆ.
ಈ ಶಿಫಾರಸುಗಳ ಅನುಷ್ಠಾನಕ್ಕೆ ನೇತೃತ್ವ ಜಿಲ್ಲೆಗಳಲ್ಲಿ ಯೋಜನೆಗಳ ಮೇಲ್ವಿಚಾರಣಾ ಸಮಿತಿಗಳ ನೇತೃತ್ವ ಸಂಸದರಿಗೆ ಲಭಿಸಲಿದೆ. ಈಗ ಅವುಗಳ ನೇತೃತ್ವ ಜಿಲ್ಲಾ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಿಗಿದೆ.
ಈ ಟಿಪ್ಪಣಿಯಂತೆ ಸಂಸದರಿಗೆ ಸಮಿತಿಗಳ ನೇತೃತ್ವ ನೀಡಲು ಅವಕಾಶವಾಗುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿಯಮಗಳಿಗೆ ತಿದ್ದುಪಡಿ ತರುತ್ತಿದೆ.
ಮಾಧ್ಯಮಗಳಲ್ಲಿ ಸರಕಾರದ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಪ್ರತಿ ಸಚಿವನೂ ಪ್ರತಿ ವಾರ ದೂರದರ್ಶನ, ಆಕಾಶವಾಣಿ ಹಾಗೂ ಒಂದು ನಿರ್ದಿಷ್ಟ ಸುದ್ದಿ ಸಂಸ್ಥೆಗೆ ಕನಿಷ್ಠ 2 ಸಂದರ್ಶನಗಳನ್ನಾದರೂ ನೀಡಬೇಕೆಂದು ಸಚಿವರ ಗುಂಪು ಶಿಫಾರಸು ಮಾಡಿದೆ.