×
Ad

ಒ ಬ್ರಿಯೆನ್ ವಿರುದ್ಧ ಕಾರಟ್ ದೂರು

Update: 2016-04-24 23:32 IST

ಹೊಸದಿಲ್ಲಿ,ಎ.24: ಗೃಹಸಚಿವ ರಾಜನಾಥ ಸಿಂಗ್ ಅವರು ತನಗೆ ಸಿಹಿ ನೀಡುತ್ತಿರುವಂತೆ ತೋರಿಸಲು ಛಾಯಾಚಿತ್ರವೊಂದನ್ನು ರೂಪಾಂತರಗೊಳಿಸಿದ್ದಕ್ಕಾಗಿ ಸಿಪಿಎಂ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಾರಟ್ ಅವರು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ ಬ್ರಿಯೆನ್ ವಿರುದ್ಧ ರವಿವಾರ ಇಲ್ಲಿಯ ಮಂದಿರ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ರಾಜಕೀಯ ಪಕ್ಷವೊಂದು ಮಾಡಿರುವಂತೆ ಫೋಟೊವನ್ನು ರೂಪಾಂತರಿಸುವುದು ಸೈಬರ್ ಕಾನೂನಿನಡಿ ಅಪರಾಧವಾಗಿದೆ ಎಂದು ದೂರನ್ನು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಾಟ್ ಹೇಳಿದರು.
 ಇಂತಹ ವೇದಿಕೆಯಲ್ಲಿ ಅಥವಾ ಸಮಾರಂಭದಲ್ಲಿ ಕಾರಟ್ ಎಂದಿಗೂ ರಾಜನಾಥ್‌ರನ್ನು ಭೇಟಿಯಾಗಿಲ್ಲ. ಹೀಗಾಗಿ ಫೋಟೊವನ್ನು ರೂಪಾಂತರಿಸಿರುವುದು ರಾಜಕೀಯ ದುರುದ್ದೇಶದ ಕೃತ್ಯವಾಗಿದೆ ಎಂದು ಸಿಪಿಎಂ ಮೂಲಗಳು ತಿಳಿಸಿದವು.
ಶನಿವಾರ ಕೋಲ್ಕತಾದಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕರಾಗಿರುವ ಒ ಬ್ರಿಯೆನ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣಗಳ ಎರಡು ವೀಡಿಯೊಗಳು ಮತ್ತು ರಾಜನಾಥ ಅವರು ಕಾರಾಟ್‌ಗೆ ಸಿಹಿಯನ್ನು ನೀಡುತ್ತಿರುವ ಚಿತ್ರ ಸೇರಿದಂತೆ ನಾಲ್ಕು ಫೋಟೊಗಳನ್ನು ಪ್ರದರ್ಶಿಸಿದ್ದರು. ಈ ಚಿತ್ರದತ್ತ ನಿರ್ದಿಷ್ಟವಾಗಿ ಬೆಟ್ಟು ಮಾಡಿದ್ದ ಅವರು,ಇದು ತನ್ನ ನೆಚ್ಚಿನ ಚಿತ್ರವಾಗಿದೆ ಎಂದು ಹೇಳಿದ್ದರು.

ಆದರೆ ಕೆಲವೇ ಸಮಯದಲ್ಲಿ ಇದು ಫೋಟೊಶಾಪ್ ಕೈಚಳಕ ಮತ್ತು ಬಿಜೆಪಿ-ಸಿಪಿಎಂ ನಾಯಕರು ನಿಕಟ ಸಂಬಂಧ ಹೊಂದಿದ್ದಾರೆ ಎಂದು ಬಿಂಬಿಸುವ ಪ್ರಯತ್ನವಾಗಿತ್ತು ಎನ್ನುವುದು ಬಯಲಾಗಿತ್ತು. ರಾಜನಾಥ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಹಿ ನೀಡುತ್ತಿರುವ ಮೂಲಚಿತ್ರವನ್ನು ಬಿಜೆಪಿ ಬಿಡುಗಡೆಗೊಳಿಸಿತ್ತು. ಇದು ಫೋಟೊಶಾಪ್ ಕೈಚಳಕವೆಂದು ಬಳಿಕ ಒಪ್ಪಿಕೊಂಡಿದ್ದ ತೃಣಮೂಲ ಕಾಂಗ್ರೆಸ್, ಚಿತ್ರವನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದು ಹಾಕಿತ್ತು.
 ಇದೊಂದು ತಪ್ಪಾಗಿತ್ತು ಎಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದ ಒ ಬ್ರಿಯೆನ್,ಈ ಅಧ್ಯಾಯವನ್ನು ಇಲ್ಲಿಗೇ ಮುಗಿಸಲು ಬಯಸಿದ್ದಾಗಿ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News