‘ಲೋಕ ಸಂಚಾರಿ’ ಮೋದಿ ಬರಪೀಡಿತ ಪ್ರದೇಶಗಳನ್ನೂ ಸಂದರ್ಶಿಸಲಿ: ಶಿವಸೇನೆ
ಮುಂಬೈ, ಎ. 25: ಜಗತ್ತಿನ ವಿವಿಧ ದೇಶಗಳಿಗೆ ಭೇಟಿ ನೀಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಬರಪೀಡಿತ ಮರಾಠ್‌ವಾಡ ಸಂದರ್ಶಿಸಲು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಮೋದಿ ವಿಶ್ವ ನಾಯಕನಾಗಿದ್ದಾರೆ. ಅವರು ಚುನಾವಣೆ ವೇಳೆ 20ರಷ್ಟು ರ್ಯಾಲಿಗಳನ್ನು ಆಯೋಜಿಸುತ್ತಾರೆ. ಆದರೆ ಬರದಿಂದ ತತ್ತರಿಸಿರುವ ಮರಾಠವಾಡಕ್ಕೆ ಭೇಟಿ ನೀಡದಿರುವುದು, ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸದಿರಲು ಕಾರಣವೇನು ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಪ್ರಶ್ನಿಸಿದ್ದಾರೆ.
ಇದೇ ವೇಳೆ ನರೇಂದ್ರ ಮೋದಿ ವಿರುದ್ಧ ಶಿವಸೇನೆಯ ಮುಖವಾಣಿ ಸಾಮ್ನಾ ಕೂಡ ರಂಗಕ್ಕಿಳಿದಿದೆ. ಚುನಾವಣೆಗಿಂತ ಮುಂಚೆ ಮೋದಿ ಹಲವಾರು ದೊಡ್ಡ ಭರವಸೆಗಳನ್ನು ನೀಡಿದ್ದರು. ಕಪ್ಪು ಹಣ ತರುತ್ತೇವೆ, ಪ್ರತಿ ವರ್ಷ 20 ಮಿಲ್ಯನ್ ಉದ್ಯೋಗ ಸೃಷ್ಟಿಸಲಾಗುವುದು. ಅಚ್ಛೇದಿನ್ ಬರುತ್ತದೆ ಎಂದೆಲ್ಲ ಹೇಳಿದ್ದರು. ಆದರೆ ಮೋದಿ ಪ್ರಧಾನಿಯಾದಾಗ ಭರವಸೆಗಳನ್ನು ಜಾರಿ ಮಾಡುವುದರಲ್ಲಿ ವಿಫಲರಾದರು ಎಂದು ಸಾಮ್ನಾದ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.