×
Ad

ಮುಸ್ಲಿಮರ ಸುರಕ್ಷತೆ ಮೋದಿ ಬಯಕೆ: ನಜ್ಮಾ ಹೆಫ್ತುಲ್ಲಾ

Update: 2016-04-25 15:08 IST

ಹೊಸದಿಲ್ಲಿ, ಎಪ್ರಿಲ್ 25: ಅಲ್ಪಸಂಖ್ಯಾತರ ಸಚಿವೆ ನಜ್ಮಾ ಹೆಫ್ತುಲ್ಲಾ ಎರಡು ವಾರಗಳ ಮೊದಲುಪ್ರಧಾನಿ ನರೇಂದ್ರಮೋದಿ ಸರಕಾರಿ ನೌಕರಿಯಲ್ಲಿ ಮುಸ್ಲಿಮರ ಪ್ರಾತಿನಿಧಿತ್ವದ ವಿವರವನ್ನು ಕೇಳಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಬಿಬಿಸಿ ಹಿಂದಿಯೊಂದಿಗೆ ಮಾತುಕತೆಯ ವೇಳೆ ಕ್ಯಾಬಿನೆಟ್ ಸಚಿವೆಯಾದ ನಜ್ಮಾ ಹೆಫ್ತುಲ್ಲಾ ಭಾರತದಲ್ಲಿ ಮುಸ್ಲಿಮರ ಹಿಂದುಳಿಯುವಿಕೆ ಬಿಜೆಪಿಯಲ್ಲ ಅದಕ್ಕಿಂತ ಹಿಂದಿನ ಸರಕಾರಗಳು ಕಾರಣವಾಗಿದೆ ಎಂದು ಹೇಳಿದ್ದಾರೆ.

"ನರೇಂದ್ರ ಮೋದಿ ಸರಕಾರಿ ನೌಕರಿಯಲ್ಲಿ ಮತ್ತು ಸರ್ವೀಸ್‌ನಲ್ಲಿ(ಸೇನೆ) ಮುಸ್ಲಿಮರು ಸಹಿತ ಅಲ್ಪಸಂಖ್ಯಾತ ಸಮುದಾಯದ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಲು ಬಯಸಿದರು. ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಇರಲು ಕಾರಣವೇನೆಂದು ತಿಳಿಯಲು ಮೋದಿ ಬಯಸಿದ್ದರು" ಎಂದು ನಜ್ಮಾ ಹೇಳಿದ್ದಾರೆ.

ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಸಂಸದೆಯಾಗಿದ್ದು ಈಗ ಬಿಜೆಪಿಯ ಹಿರಿಯ ಸಚಿವೆಯಾಗಿರುವ ನಜ್ಮಾ ಹೆಫ್ತುಲ್ಲಾ ಭಾರತದ ಅಲ್ಪಸಂಖ್ಯಾತ ಸಮುದಾಯದತ್ತ ಎಷ್ಟು ಗಮನಹರಿಸಬೇಕಿತ್ತು ಅಷ್ಟು ನೀಡಿಲ್ಲ ಎಂದು ವಿಷಾದ ಸೂಚಿಸಿದ್ದಾರೆ. ಕಳೆದ ಕೆಲವುದಿನಗಳಿಂದ ತಾನೊಬ್ಬ ಮುಸ್ಲಿಮ್ ಅಧಿಕಾರಿಯನ್ನು ಹುಡುಕುತ್ತಿದ್ದೇನೆ. ಹಜ್‌ನ ಸಂದರ್ಭವಾಗಿದ್ದು ಅಲ್ಲಿ ಹೋಗಿ ಬರಲು ಉಪಯುಕ್ತವಾಗಬೇಕಿದೆ. ಆದರೆ ಎಷ್ಟು ಹುಡುಕಿದರೂ ಸಿಕ್ಕಿಲ್ಲ ಎಂದು ಸಚಿವೆ ಹೇಳಿದ್ದಾರೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಮರಲ್ಲಿ ತಮ್ಮ ಸುರಕ್ಷಿತೆ ಕುರಿತು ಆತಂಕ ಹೆಚ್ಚಳವಾಗಿದೆ ಎಂಬ ಮಾತನ್ನು ನಜ್ಮಾ ಖಂಡಿಸಿದ್ದಾರೆ. ಯುಪಿಎ ಸರಕಾರದ ವೇಳೆ ಜಸ್ಟಿಸ್ ರಾಜಿಂದರ್ ಸಾಚಾರ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ಮುಸ್ಲಿಮರ ಸ್ಥಿತಿಗತಿ ಅಧ್ಯಯನ ನಡೆಸಲು ರಚಿಸಲಾಗಿತ್ತು. ಅದು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ.

2006ರಲ್ಲಿ ಹೊರಬಂದ ಈ ವರದಿಯಲ್ಲಿ ಮುಸ್ಲಿಮರಲ್ಲಿ ಶೇ. 2.5 ಮಂದಿ ಮಾತ್ರ ಬ್ಯೂರೊಕ್ರಸಿಯಲ್ಲಿದ್ದರು. ಆಗ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಶೆ.14ಕ್ಕೂ ಹೆಚ್ಚಿತ್ತು. ಈ ವರದಿಯ ಎಂಟು ವರ್ಷಗಳ ಬಳಿಕ ಜೆಎನ್‌ಯು ಪ್ರೊಫೆಸರ್ ಅಮಿತಾಭ್ ಕುಂಡು ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಯಿತು. ಇದು 2014ಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಈ ಸಮಿತಿಯು ಸಾಚರ್ ವರದಿ ಬಳಿಕ ಸರಕಾರದ ಗಮನ ಈ ಸಮುದಾಯದತ್ತ ಹರಿದಿದ್ದರೂ ಅದು ಸಾಕಷ್ಟು ಪ್ರಮಾಣದಲ್ಲಿಲ್ಲ ಎಂದು ತನ್ನ ವರದಿಯಲ್ಲಿ ವಿವರಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News