×
Ad

ಉತ್ತರಾಖಂಡ:ಒಂಬತ್ತಕ್ಕಿಂತ ಹೆಚ್ಚು ಬಂಡುಕೋರ ಕಾಂಗ್ರೆಸ್ ಶಾಸಕರ ಬೆಂಬಲ ನಮಗಿದೆ:ಬಿಜೆಪಿ ನಾಯಕ

Update: 2016-04-25 18:01 IST

ಹೊಸದಿಲ್ಲಿ,ಎ.25: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಕುರಿತ ಕಾನೂನು ಸಮರದ ನಡುವೆಯೇ ಬಿಜೆಪಿಯ ಹಿರಿಯ ನಾಯಕರೋರ್ವರು ಒಂಬತ್ತು ಅನರ್ಹ ಶಾಸಕರಲ್ಲದೆ ಇನ್ನೂ ಹೆಚ್ಚಿನ ಕಾಂಗ್ರೆಸ ಶಾಸಕರ ಬೆಂಬಲ ತಮ್ಮ ಪಕ್ಷಕ್ಕಿದೆ ಎಂದು ಸೋಮವಾರ ಇಲ್ಲಿ ಸುಳಿವು ನೀಡಿದರು.

ಬಿಜೆಪಿಯನ್ನು ಬೆಂಬಲಿಸುವುದಾಗಿ ಒಂಬತ್ತು ಬಂಡುಕೋರರು ಮಾತ್ರ ಬಹಿರಂಗವಾಗಿ ಪ್ರಕಟಿಸಿದ್ದಾರಾದರೂ ಸದನದಲ್ಲಿ ಬಲಾಬಲ ಪರೀಕ್ಷೆಯ ಸಂದರ್ಭ ಇನ್ನಷ್ಟು ಕಾಂಗ್ರೆಸ್ ಶಾಸಕರು ನಿಷ್ಠೆಯನ್ನು ಬದಲಿಸಬಹುದು ಎಂದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಕುರಿತು ಪ್ರಕರಣವು ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಬಿಜೆಪಿ ಮುಗುಮ್ಮಾಗಿದೆ. ಇದೇ ವೇಳೆ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಒಂಬತ್ತು ಶಾಸಕರು ಸಲ್ಲಿಸಿರುವ ಅರ್ಜಿ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.

 ನಮಗೆ ಸರಳ ಬಹುಮತಕ್ಕೆ ಒಂಬತ್ತು ಶಾಸಕರ ಬೆಂಬಲ ಅಗತ್ಯವಿರುವುದರಿಂದ ಅಷ್ಟೇ ಸಂಖ್ಯೆಯ ಶಾಸಕರು ಬಹಿರಂಗವಾಗಿ ಬೆಂಬಲವನ್ನು ಘೋಷಿಸಿದ್ದಾರೆ. ನಮಗೆ ಹೆಚ್ಚಿನ ಶಾಸಕರ ಬೆಂಬಲವಿರಬಹುದು. ಈ ಒಂಬತ್ತು ಶಾಸಕರ ಅನರ್ಹತೆ ರದ್ದಾಗದಿದ್ದರೂ ಬಿಜೆಪಿಗೆ ಬಹುಸಂಖ್ಯಾತ ಶಾಸಕರ ಬೆಂಬಲವಿದೆ ಎಂದು ಹೆಸರು ಉಲ್ಲೇಖಿಸಲು ಬಯಸದ ಈ ನಾಯಕರು ಹೇಳಿದರು.

71 ಸದಸ್ಯ ಬಲದ ವಿಧಾನಸಭೆಯಲ್ಲಿ ಒಂಬತ್ತು ಕಾಂಗ್ರೆಸ್ ಮತ್ತು ಓರ್ವ ಬಿಜೆಪಿ ಬಂಡುಕೋರ ಶಾಸಕರನ್ನು ಹೊರತುಪಡಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 27 ಶಾಸಕರನ್ನು ಹೊಂದಿವೆ.

ಅಲ್ಲದೆ ಮೂವರು ಪಕ್ಷೇತರರು ಸೇರಿದಂತೆ ಆರು ಶಾಸಕರ ಗುಂಪೊಂದಿದ್ದು,ಅದು ಹರೀಶ ರಾವತ್ ಸರಕಾರ ಪದಚ್ಯುತಗೊಂಡಾಗ ಅದನ್ನು ಬೆಂಬಲಿಸಿತ್ತು. ಈ ಪೈಕಿ ಕೆಲವರ ಬೆಂಬಲ ಪಡೆಯಲು ಸಾಧ್ಯ ಎಂದು ಬಿಜೆಪಿ ಲೆಕ್ಕ ಹಾಕಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News