×
Ad

ಮೂರು ತಿಂಗಳುಗಳಲ್ಲಿ 116 ರೈತರ ಆತ್ಮಹತ್ಯೆ

Update: 2016-04-26 19:15 IST

     ಹೊಸದಿಲ್ಲಿ,ಎ.26: ಈ ವರ್ಷ ಇಲ್ಲಿಯವರೆಗೆ ಕೃಷಿ ಸಮಸ್ಯೆಗಳಿಂದಾಗಿ 116 ಕೃಷಿಕರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಗರಿಷ್ಠ57 ಪ್ರಕರಣಗಳು ಮಹಾರಾಷ್ಟ್ರದಿಂದ ವರದಿಯಾಗಿದ್ದು,ಪಂಜಾಬ್ ಮತ್ತು ತೆಲಂಗಾಣ ನಂತರದ ಸ್ಥಾನಗಳಲ್ಲಿವೆ ಎಂದು ಸಹಾಯಕ ಕೃಷಿಸಚಿವ ಮೋಹನಭಾಯಿ ಕುಂದರಿಯಾ ಅವರು ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

2015ರಲ್ಲಿ ದೇಶದಲ್ಲಿ 2,000ಕ್ಕೂ ಅಧಿಕ ಕೃಷಿಕರು ಆತ್ಮಹತ್ಯೆಗೆ ಶರಣಾಗಿದ್ದು,ಅತ್ಯಧಿಕ 1,841 ಪ್ರಕರಣಗಳು ಮಹಾರಾಷ್ಟ್ರದಿಂದ ವರದಿಯಾಗಿವೆ ಎಂದರು.

2015-16 ಬೆಳೆ ವರ್ಷದಲ್ಲಿ ಕರ್ನಾಟಕ ಸೇರಿದಂತೆ 10 ಬರಪೀಡಿತ ರಾಜ್ಯಗಳಿಗೆ 12,773.34 ಕೋ.ರೂ.ಪರಿಹಾರ ಪ್ಯಾಕೇಜ್‌ಗೆ ಸರಕಾರವು ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು. ರಾಜಸ್ಥಾನ ಮತ್ತು ಹರ್ಯಾಣಗಳಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಗೋದಿ ಸೇರಿದಂತೆ 15.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಹಿಂಗಾರು ಬೆಳೆಗಳಿಗೆ ಹಾನಿಯಾಗಿದೆ ಎಂದು ಪ್ರತ್ಯೇಕ ಉತ್ತರದಲ್ಲಿ ಸಚಿವರು ತಿಳಿಸಿದರು.

ಕರ್ನಾಟಕ ಸರಕಾರವೂ 22.33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಬರದಿಂದಾಗಿ ನಷ್ಟಗೊಂಡಿದೆ ಎಂದು ವರದಿ ಸಲ್ಲಿಸಿದ್ದು, ಕೇಂದ್ರದಿಂದ 1,417.14 ಕೋ.ರೂ.ಗಳ ಆರ್ಥಿಕ ನೆರವನ್ನು ಕೋರಿದೆ ಎಂದರು.

ಬರ ಪರಿಸ್ಥಿತಿಯನ್ನು ಎದುರಿಸಲು ಪರಿಹಾರ ಪ್ಯಾಕೇಜ್‌ಗಳ ಜೊತೆಗೆ ಡೀಸೆಲ್/ಬೀಜ ಸಹಾಯಧನ ಅನುಷ್ಠಾನ,ನರೇಗಾದಡಿ ಹೆಚ್ಚುವರಿ 50 ದಿನ ಉದ್ಯೋಗ ಸೇರಿದಂತೆ ಇತರ ಕ್ರಮಗಳನ್ನೂ ಸರಕಾರವು ತೆಗೆದುಕೊಂಡಿದೆ ಎಂದರು.

2015-16 ರಲ್ಲಿ ಈವರೆಗೆ ಹತ್ತು ಬರಪೀಡಿತ ರಾಜ್ಯಗಳಿಗೆ ನರೇಗಾದಡಿ 18,408.98 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕೃಷಿಕರನ್ನು ಖಾಸಗಿ ಲೇವಿದಾರರ ಹಿಡಿತದಿಂದ ಪಾರು ಮಾಡಲು ಶೇ.7ರ ಬಡ್ಡಿದರದಲ್ಲಿ ಅಲ್ಪಾವಧಿ ಹಾಗೂ ಮಧ್ಯಮ/ದೀರ್ಘಾವಧಿ ಕೃಷಿಸಾಲಗಳನ್ನು ಒದಗಿಸಲಾಗುತ್ತಿದೆ ಮತ್ತು ಸಕಾಲದಲ್ಲಿ ಸಾಲ ಮರುಪಾವತಿಸುವವರಿಗೆ ಬಡ್ಡಿಯಲ್ಲಿ ಶೇ.3ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News