ಟಿಟ್ಲಾನಗರ ದೇಶದಲ್ಲೇ ಅತ್ಯಧಿಕ ಬಿಸಿ
ಟಿಟ್ಲಾಗಡ (ಒಡಿಶಾ), ಎ.26: ಪಶ್ಚಿಮ ಒಡಿಶಾದ ಬೊಲಾಂಗಿರ್ ಜಿಲ್ಲೆಯ 60 ಸಾವಿರ ಜನ ಸಂಖ್ಯೆಯ ಟಿಟ್ಲಾಗಡ ಪಟ್ಟಣದ ಬೀದಿಗಳಲ್ಲಿ ಹಗಲು 11 ಗಂಟೆಗೆ ಒಂದೇ ಒಂದು ಮನುಷ್ಯ ಪ್ರಾಣಿ ಕಣ್ಣಿಗೆ ಬಿದ್ದರೆ, ಅದು ನಿಮ್ಮ ಅದೃಷ್ಟ. ಇಲ್ಲಿನ ಜನರು ಹಗಲು 10 ಗಂಟೆಯೊಳಗೆ ಮನೆಯೊಳಗೆ ಸೇರಿಕೊಂಡರೆ ಸಂಜೆ 6ರವರೆಗೆ ಹೊರಗೆ ತಲೆ ಹಾಕುವುದಿಲ್ಲ. ಏರುತ್ತಿರುವ ತಾಪಮಾನದಿಂದ ತಲೆ ಒಡೆಸಿಕೊಳ್ಳಲು ಅಥವಾ ಕಾದ ಕಾವಲಿಯಂತಿರುವ ರಸ್ತೆಗಳಲ್ಲಿ ಕಾಲು ಸುಡಿಸಿಕೊಳ್ಳಲು ಇಲ್ಲಿನವರು ತಯಾರಿಲ್ಲ!.
ಬೇಗೆಯಿಂದ ರಕ್ಷಿಸಿಕೊಳ್ಳಲು ಜನರು ತಮ್ಮ ಮನೆಗಳೊಳಗೆ ಹವಾ ನಿಯಂತ್ರಣ, ತಂಪುಕಾರಕ, ಫ್ಯಾನ್‌ಗಳಿಂದ ತೊಡಗಿ ದೇಹ ತಂಪಾಗಿಸುವ ಆಹಾರದವರೆಗೆ ಸಾಧ್ಯವಿರುವುದನ್ನೆಲ್ಲ ಮಾಡುತ್ತಾರೆ. ಸೂರ್ಯ ನೆತ್ತಿಗೇರುತ್ತಿರುವಂತೆ ಜನರು ಬಿಡಿ, ಬೀದಿ ನಾಯಿಗಳು, ಬೀಡಾಡಿ ಜಾನುವಾರುಗಳೂ ರಸ್ತೆಯಲ್ಲಿ ಕಾಣಿಸುವುದಿಲ್ಲ.
ಹಗಲು 10ರ ಬಳಿಕ ಟಿಟ್ಲಾಗಡದಲ್ಲಿ ಅಘೋಷಿತ ಕರ್ಫ್ಯೂ ರೀತಿಯ ವಾತಾವರಣವಿರುತ್ತದೆ. ಆ ಸಮಯ ನೀವು ರಸ್ತೆಯಲ್ಲಿದ್ದೀರಾದರೆ ನೀವೊಬ್ಬ ಭಾರೀ ಧೈರ್ಯಶಾಲಿಯಿರಬೇಕು ಅಥವಾ ಪರ ಊರಿನವರಿರಬೇಕು. ಟಿಟ್ಲಾಗಡದಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ವಿಪರೀತ ಧಗೆಯೇ ಇದ್ದರೂ, ಈ ಬಾರಿ ಕುಲುಮೆಯಲ್ಲಿ ಬದುಕುತ್ತಿರುವ ಅನುಭವವಾಗುತ್ತಿದೆಯೆಂದು ಸ್ಥಳೀಯ ಕಾಂಗ್ರೆಸ್‌ನಾಯಕ ಉಪೇಂದ್ರ ಬಾಗ್ ಎಂಬವರು ಹೇಳಿದ್ದಾರೆ.
ಕಳೆದ 3 ದಿಗಳಿಂದ ಟಿಟ್ಲಾಗಡ ದೇಶದಲ್ಲೇ ಅತಿ ಹೆಚ್ಚು ಉಷ್ಣತೆಯ ಪ್ರದೇಶವಾಗಿದೆ. ರವಿವಾರ ಇಲ್ಲಿನ ತಾಪಮಾನ 48.5ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಎಪ್ರಿಲ್‌ನಲ್ಲಿ ಒಡಿಶಾದ ಸಾರ್ವಕಾಲಿಕ ಅತ್ಯಧಿಕ ತಾಪಮಾನವಾಗಿದೆ. ಕಳೆದ ವಾರದಿಂದ ಇಲ್ಲಿ ಪಾದರಸರ ಮಟ್ಟ 45 ಡಿಗ್ರಿ ಸೆಂಟಿಗ್ರೇಡ್‌ನಿಂದ ಮೇಲಕ್ಕೇರಲಾರಂಭಿಸಿದೆ.
ಕಚೇರಿಯಲ್ಲಿ ಹವಾನಿಯಂತ್ರಣವಿದ್ದರೂ ಸೆಕೆ ತಡೆಯಲಾಗುತ್ತಿಲ್ಲವೆಂದು ಟಿಟ್ಲಾಗಡ ಉಪ-ವಿಭಾಗಾಧಿಕಾರಿ ಕೈಲಾಸ್ ಸಾಹು ತಿಳಿಸಿದ್ದಾರೆ.