ಈಗ ಜಗತ್ತಿನ ಟಾಪ್ 3 ದೇಶಗಳಲ್ಲಿ ಭಾರತ !
ಹೊಸದಿಲ್ಲಿ, ಎ. 27: ಭಾರತ ಇದೀಗ ವರ್ಲ್ಡ್ ನಂಬರ್ 3 ದೇಶ. ಸಿಹಿ ಹಂಚಿ ಸಂಭ್ರಮಿಸಲು ಯೋಚಿಸುತ್ತಿದ್ದರೆ ಸ್ವಲ್ಪ ತಾಳಿ. ಇದು ಸಂತಸ ಪಡುವ ವಿಚಾರವೂ ಅಲ್ಲ; ಸಿಹಿ ಹಂಚುವ ವಿಚಾರವಂತೂ ಅಲ್ಲಲೇ ಅಲ್ಲ.
ಏಕೆಂದರೆ ಭಾರತ ಅಗ್ರ ಮೂರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಅತ್ಯಧಿಕ ಮಧುಮೇಹಿಗಳಿರುವ ದೇಶಗಳ ಪಟ್ಟಿಯಲ್ಲಿ!
2015ರಲ್ಲಿ ಭಾರತದಲ್ಲಿ ಏಳು ಕೋಟಿ ವಯಸ್ಕ ಮಧುಮೇಹಿಗಳು ದಾಖಲಾಗಿದ್ದಾರೆ. ಇನ್ನೂ ಆತಂಕದ ವಿಚಾರವೆಂದರೆ 1980 ರಿಂದ 2014ರ ಅವಧಿಯಲ್ಲಿ ಮಹಿಳೆಯರಲ್ಲಿ ಮಧುಮೇಹ ಪ್ರಮಾಣ ಶೇಕಡ 80ರಷ್ಟು ಹೆಚ್ಚಿರುವುದು ಎಂದು ಭಾರತ ಸರ್ಕಾರ ಪ್ರಕಟಿಸಿದೆ.
20 ರಿಂದ 70 ವರ್ಷದೊಳಗಿನ ಜನರ ಪೈಕಿ 2014ರಲ್ಲಿ 6.68 ಕೋಟಿ ಮಂದಿ ಮಧುಮೇಹಿಗಳಿದ್ದರೆ ಈ ಸಂಖ್ಯೆ 2015ರಲ್ಲಿ 6.91 ಕೋಟಿಗೆ ಹೆಚ್ಚಿದೆ ಎಂದು ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಐಡಿಎಫ್) ಅಂದಾಜು ಮಾಡಿದ್ದಾಗಿ ಆರೋಗ್ಯ ಸಚಿವ ಜೆ.ಪಿ.ನಡ್ಡಾ ರಾಜ್ಯಸಭೆಗೆ ತಿಳಿಸಿದ್ದಾರೆ.
ಲ್ಯಾನ್‌ಸೆಟ್ ಎಂಬ ವೈದ್ಯಕೀಯ ಕ್ಷೇತ್ರದ ನಿಯತಕಾಲಿಕದ ಪ್ರಕಾರ, ಭಾರತ ವಿಶ್ವದಲ್ಲೇ ಅತಿಹೆಚ್ಚು ಮಧುಮೇಹಿಗಳಿರುವ ಅಗ್ರ ಮೂರು ದೇಶಗಳಲ್ಲಿ ಭಾರತವೂ ಸೇರಿದೆ ಎಂದು ವಿವರಿಸಿದ್ದಾರೆ.
ಅದಾಗ್ಯೂ ಚೀನಾದಲ್ಲಿ ಭಾರತಕ್ಕಿಂತ ಅಧಿಕ ಮಧುಮೇಹಿಗಳಿದ್ದು, ಅಲ್ಲಿ 11 ಕೋಟಿ ಮಧುಮೇಹಿಗಳಿದ್ದಾರೆ. ಅಮೆರಿಕದಲ್ಲಿ 29.3 ಕೋಟಿ ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಐಡಿಎಫ್‌ನ ಏಳನೇ ವಾರ್ಷಿಕ ವರದಿ ವಿವರಿಸಿದೆ ಎಂದು ನಡ್ಡಾ ಹೇಳಿದರು.
ಕ್ಯಾನ್ಸರ್, ಮಧುಮೇಹ, ಹೃದ್ರೋಗ ಹಾಗೂ ಪಾರ್ಶ್ವವಾಯು ತಡೆ ನಿಟ್ಟಿನಲ್ಲಿ ಸರ್ಕಾರ ರಾಷ್ಟ್ರೀಯ ಕಾರ್ಯಕ್ರಮವನ್ನು ರೂಪಿಸಿದೆ ಎಂದು ಸಚಿವರು ತಿಳಿಸಿದರು.