×
Ad

ವಿಜಯ್ ಮಲ್ಯ ಭಾರತದಲ್ಲಿ ಕಂಬಿ ಎಣಿಸಲಿದ್ದಾರೆ! ಭಾರತ ಇದಕ್ಕಾಗಿ ಏನೇನು ಮಾಡಲಿದೆ?

Update: 2016-04-27 14:29 IST

ಹೊಸದಿಲ್ಲಿ: ದೇಶದ ಬ್ಯಾಂಕ್‌ಗಳಿಗೆ ದೊಡ್ಡಮೊತ್ತದ ಸುಸ್ತಿಬಾಕಿ ಉಳಿಸಿಕೊಂಡು ದೇಶದಿಂದ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್ ಮಲ್ಯ ವಿರುದ್ಧ ನ್ಯಾಯಾಲಯ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು. ಅವರ ಗಡೀಪಾರಿಗಾಗಿ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.


ಈ ಮಧ್ಯೆ ವಿಜಯ್ ಮಲ್ಯ, "ಸದ್ಯಕ್ಕೆ ಭಾರತಕ್ಕೆ ವಾಪಸಾಗುವ ಪ್ರಶ್ನೆಯೇ ಇಲ್ಲ; ಒಂದು ವೇಳೆ ಹಾಗೆ ಮಾಡಿದರೆ, ದೆಹಲಿ ವಿಮಾನ ನಿಲ್ದಾಣದಿಂದ ನೇರವಾಗಿ ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.


"ಮದ್ಯದ ದೊರೆ ದೇಶದ ಸುಪ್ರೀಂಕೋರ್ಟ್ ಜತೆ ಆಟವಾಡುತ್ತಿದ್ದಾರೆ. ಕ್ಷುಲ್ಲಕ ಕಥೆ ಕಟ್ಟಿ ಸುಪ್ರೀಂಕೋರ್ಟ್‌ನ ನಿರ್ದೇಶನಗಳಿಗೆ ಬದ್ಧರಾಗಲು ಕುಂಟು ನೆಪ ಹೇಳುತ್ತಿದ್ದಾರೆ. ಸರ್ಕಾರಕ್ಕೆ ಅವರ ಮನೋಪ್ರವೃತ್ತಿಯ ಸೂಕ್ಷ್ಮತೆ ಅರ್ಥವಾಗಿದ್ದು, ಈ ಹಿನ್ನೆಲೆಯಲ್ಲೇ ಅವರ ಪಾಸ್‌ಪೋರ್ಟ್ ರದ್ದು ಮಾಡಿ, ಜಾಮೀನು ರಹಿತ ವಾರೆಂಟ್ ಹೊರಡಿಸಿದೆ" ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ತಿಳಿಸಿದರು.


ಮಲ್ಯ ಪರವಾಗಿ ಹಾಜರಾದ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ ಅವರು, ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹಾಗೂ ಎಫ್.ಆರ್.ನಾರೀಮನ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ, "ದೇಶದಲ್ಲಿ ಸದ್ಯದ ಪರಿಸ್ಥಿತಿಯ ಅರಿವು ಇರುವ ಹಿನ್ನೆಲೆಯಲ್ಲಿ ಈ ಉದ್ಯಮಿ ಸದ್ಯಕ್ಕೆ ಭಾರತಕ್ಕೆ ಬರುತ್ತಿಲ್ಲ. ಬಂದರೆ ಸಹಾರದ ಮಾಲೀಕ ಸುಬ್ರತೋ ರಾಯ್ ಅವರ ಪರಿಸ್ಥಿತಿಯೇ ಅವರಿಗೂ ಎದುರಾಗುತ್ತದೆ ಎಂಬ ಭೀತಿ ಅವರಿಗಿದೆ" ಎಂದು ಸ್ಪಷ್ಟಪಡಿಸಿದರು. ಹೂಡಿಕೆದಾರರಿಗೆ ಹಣ ಹಿಂದಿರುಗಿಸದ ಆರೋಪದಲ್ಲಿ ಎರಡು ವರ್ಷಗಳಿಂದ ಸುಬ್ರತೊ ಅವರು ತಿಹಾರ್ ಜೈಲಿನಲ್ಲಿದ್ದಾರೆ.


ಮಲ್ಯ ಅವರಿಗೆ ಬರಲು ಇಚ್ಛೆ ಇಲ್ಲದಿದ್ದರೆ ಅವರನ್ನು ಕರೆಸಿಕೊಳ್ಳಲು ಬೇಕಾದ ಕ್ರಮವನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ರೋಹಟ್ಗಿ ತಿಳಿಸಿದರು. ಸರ್ಕಾರದ ಧೋರಣೆಯನ್ನು ಖಂಡಿಸಿದ ವೈದ್ಯನಾಥನ್ ಅವರು, ಸರ್ಕಾರದ ಈ ಧೋರಣೆಯಿಂದಾಗಿಯೇ ಮಲ್ಯ ದೇಶಕ್ಕೆ ಬರಲು ಒಪ್ಪುತ್ತಿಲ್ಲ. ಅವರು ಸುಸ್ತಿದಾರರು ನಿಜ. ಆದರೆ ಉದ್ದೇಶಪೂರ್ವಕ ಸುಸ್ತಿದಾರರಲ್ಲ. ಅವರು ವಾಸ್ತವ ಉದ್ಯಮಿ ಎಂದು ಸಮರ್ಥಿಸಿಕೊಂಡರು. ವ್ಯಾವಹಾರಿಕ ದುರಂತದಿಂದ ಕಿಂಗ್‌ಫಿಶರ್ ಮುಳುಗಿದೆ. ಇದುವರೆಗೆ ಏರ್‌ಇಂಡಿಯಾ ವಿಮಾನಯಾನಕ್ಕೆ ಸರ್ಕಾರ 40 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ ಆದರೆ ಕಿಂಗ್‌ಫಿಷರ್‌ಗೆ ಸರ್ಕಾರದ ನೆರವು ಸಿಕ್ಕಿಲ್ಲ. ಈ ಕಾರಣದಿಂದ 4000 ಕೋಟಿ ರೂಪಾಯಿ ನಷ್ಟದಲ್ಲಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News