×
Ad

ಅಗಸ್ಟಾ ವೆಸ್ಟ್‌ಲ್ಯಾಂಡ್ ವಿಚಾರ ಬಿಜೆಪಿಯವರು ಏನು ಬೇಕಾದರೂ ಹೇಳಲಿ ತಾನು ಯಾರಿಗೂ ಹೆದರುವುದಿಲ್ಲ: ಸೋನಿಯಾಗಾಂಧಿ

Update: 2016-04-27 14:49 IST

ಹೊಸದಿಲ್ಲಿ, ಎಪ್ರಿಲ್ 27: ಆರು ವರ್ಷ ಹಳೆಯ ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಪ್ರಕರಣ ಮತ್ತೆ ಚರ್ಚೆಯಲ್ಲಿದೆ. ಈ ಪ್ರಕರಣದ ಕುರಿತು ರಾಜ್ಯಸಭೆಯಲ್ಲಿ ಬುಧವಾರ ಭಾರೀ ಕೋಲಾಹಲ ನಡೆದಿದೆ. ಆದಕಾರಣ ಕಾರ್ಯಕಲಾಪ ಸ್ಥಗಿತಗೊಳಿಸಬೇಕಾಯಿತು. ರಾಜ್ಯಸಭೆಯಲ್ಲಿ ಕಾರ್ಯಕಲಾಪ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಈ ಪ್ರಕರಣದಲ್ಲಿ ಸೋನಿಯಾ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ನಾಯಕರು ಗದ್ದಲವೆಬ್ಬಿಸಿದರು. ಬಿಜೆಪಿ ಆರೋಪದ ಕುರಿತು ಪತ್ರಕರ್ತರು ಸೋನಿಯಾಗಾಂಧಿಯವರನ್ನು ಪ್ರಶ್ನಿಸಿದಾಗ ’ನಾವು ಯಾವುದನ್ನೂ ಅಡಗಿಸಿಟ್ಟಿಲ್ಲ. ಅವರು ನಮ್ಮ ಹೆಸರು ಎತ್ತಲಿ. ನಾನು ಯಾರಿಗೂ ಹೆದರುವುದಿಲ್ಲ. ಈ ಸರಕಾರ ಎರಡು ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಈವರೆಗೂ ಯಾಕೆ ತನಿಖೆ ಪೂರ್ತಿಗೊಳಿಸಿಲ್ಲ’ ಎಂದಿರುವುದಾಗಿ ವರದಿಯಾಗಿದೆ.

ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಝಾದ್ ಎರಡೂ ದೇಶಗಳ ಪ್ರಧಾನ ಮಂತ್ರಿಗಳ ನಡುವೆ ಮಾತುಕತೆ ನಡೆಯಿತು. ಅವರ ಇಬ್ಬರ ನಡುವೆ ವ್ಯಾಪಾರ ಕುದುರಿತ್ತೇ? ಯುಪಿಎ ಸರಕಾರ ಕ್ರಮ ಕೈಗೊಂಡಿದೆ ಮತ್ತು ವ್ಯವಹಾರವನ್ನು ವಜಾಗೊಳಿಸಿದೆ. ಹಾಗಿದ್ದೂ ಈ ಕಂಪೆನಿಯನ್ನು ಮೋದಿ ಸರಕಾರ ಯಾಕೆ ಮೇಕ್ ಇನ್ ಇಂಡಿಯಾದ ಭಾಗವಾಗಿ ಮಾಡಿತು? ಎಂದು ಪ್ರಶ್ನಿಸಿದರು. ವಿತ್ತ ಸಚಿವ ಅರುಣ್ ಜೇಟ್ಲಿ ಉತ್ತರಿಸುತ್ತಾ ಭಾರತ ಮತ್ತು ಇಟಲಿ ಪ್ರಧಾನಿಗಳ ನಡುವೆ ಯಾವುದೇ ಭೇಟಿ ಆಗಿಲ್ಲ. ಇದು ತಪ್ಪು ವರದಿಯಾಗಿದೆ ಎಂದರು.

ಪ್ರಕರಣದಲ್ಲಿ ಬಿಜೆಪಿಯ ಆಕ್ರಮಣಕಾರಿ ನಡೆಯ ಬಳಿಕ ಸೋನಿಯಾ ಗಾಂಧಿ ಜನಪಥ್ ಹತ್ತರ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮ, ಐಎಸ್ ಸುರ್ಜೆವಾಲಾ ಮತ್ತು ಜ್ಯೋತಿರಾದಿತ್ಯ ಸಿಂಧ್ಯಾ ಇದ್ದರು. ಈ ನಡುವೆ ಮನಮೋಹನ ಸಿಂಗ್ ’ಈ ವಿಷಯದಲ್ಲಿ ಯಾವುದೇ ಕೇಸು ಆಗಿಲ್ಲ. ನನ್ನ ಪಕ್ಷ ಇದಕ್ಕೆ ಉತ್ತರಿಸಲಿದೆ’ ಎಂದು ಹೇಳಿದ್ದಾರೆ. ಕಳೆದ ದಿನ ಇಟಲಿಯ ಮಿಲಾನ್ ಕೋರ್ಟ್ ತನ್ನ ತೀರ್ಪಿನಲ್ಲಿ 3600 ಕೋಟಿರೂಪಾಯಿ ಹೆಲಿಕಾಪ್ಟರ್ ಡೀಲ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News