ವೀಸಾ ಪಡೆಯಲು ಸತ್ಯಾಂಶ ಬಚ್ಚಿಟ್ಟಿದ್ದ ಇಸಾ: ಭಾರತ
ಹೊಸದಿಲ್ಲಿ,ಎ.28: ಉಯ್ಘರ್ ನಾಯಕ ಡೋಲ್ಕನ್ ಇಸಾಗೆ ವೀಸಾ ಕುರಿತಂತೆ ತಾನು ಚೀನಾದ ಒತ್ತಡಕ್ಕೆ ಮಣಿದಿದ್ದೆ ಎಂಬ ಆರೋಪವನ್ನು ನಿರಾಕರಿಸಿರುವ ಭಾರತವು, ಅವರಿಗೆ ನೀಡಲಾಗಿದ್ದ ವೀಸಾವನ್ನು ರದ್ದುಗೊಳಿಸಿದ ತನ್ನ ನಿರ್ಧಾರವನ್ನು ಗುರುವಾರ ಸಮರ್ಥಿಸಿಕೊಂಡಿದೆ. ವೀಸಾ ಪಡೆದುಕೊಳ್ಳುವಾಗ ಇಸಾ ಸತ್ಯಾಂಶಗಳನ್ನು ಬಚ್ಚಿಟ್ಟಿದ್ದರು ಎಂದು ಹೇಳಿದೆಯಾದರೂ, ಇಸಾ ವಿರುದ್ಧದ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸನ್ನು ಭಾರತವು ಗೌರವಿಸಬೇಕೆಂದು ಚೀನಾ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು ಎನ್ನುವುದನ್ನು ಒಪ್ಪಿಕೊಂಡಿದೆ.
ಇಸಾ ವಿದ್ಯುನ್ಮಾನ ವ್ಯವಸ್ಥೆಯಡಿ ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು ಮತ್ತು ಅವರಿಗೆ ವೀಸಾ ನೀಡಲಾಗಿತ್ತು. ವೀಸಾ ಪಡೆದುಕೊಂಡ ನಂತರ ಇಸಾ ಅವರು, ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ತಾನು ಭಾರತಕ್ಕೆ ಬರುತ್ತಿರುವುದಾಗಿ ಬಹಿರಂಗವಾಗಿ ಹೇಳಿದ್ದರು. ಈ ಅಂಶವನ್ನು ತನ್ನ ವೀಸಾ ಅರ್ಜಿಯಲ್ಲಿ ಅವರು ಮುಚ್ಚಿಟ್ಟಿದ್ದರು ಮತ್ತು ಪ್ರವಾಸಿ ವೀಸಾ ಇಂತಹದಕ್ಕೆ ಅನುಮತಿ ನೀಡುವುದಿಲ್ಲ. ಅಲ್ಲದೆ ಇಸಾ ವಿರುದ್ಧ ಇಂಟರ್‌ಪೋಲ್‌ನ ರೆಡ್‌ಕಾರ್ನರ್ ನೋಟಿಸ್ ಇದೆ ಎನ್ನುವುದೂ ನಂತರ ತಿಳಿದು ಬಂದಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ತಿಳಿಸಿದರು.
ಇಸಾಗೆ ವೀಸಾ ನೀಡಿಕೆಯ ಬಗ್ಗೆ ಚೀನಾ ಆಕ್ಷೇಪವೆತ್ತಿತ್ತೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಇಸಾ ವಿರುದ್ಧ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸನ್ನು ಹೊರಡಿಸಿದೆ ಮತ್ತು ಇಂಟರ್‌ಪೋಲ್‌ನ ಸದಸ್ಯ ರಾಷ್ಟ್ರಗಳು ಅದನ್ನು ಗೌರವಿಸಬೇಕಾಗುತ್ತದೆ ಎಂಬ ತನ್ನ ನಿಲುವನ್ನು ಅದು ಸ್ಪಷ್ಟಪಡಿಸಿತ್ತು ಎಂದು ಅವರು ಉತ್ತರಿಸಿದರು.
ಇಸಾ ಸತ್ಯಾಂಶವನ್ನು ಮುಚ್ಚಿಟ್ಟಿದ್ದರು. ಹೀಗಾಗಿ ಅವರ ವೀಸಾ ರದ್ದುಗೊಂಡಿದೆ. ಭಾರತದ ಕ್ರಮಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.