×
Ad

ಆಡಿಟರ್ ಮೇಲೆ ಹಲ್ಲೆ ಪ್ರಕರಣದಲ್ಲಿ ಕಂಚಿಶ್ರೀ ಮತ್ತು ಇತರರ ಖುಲಾಸೆ

Update: 2016-04-29 19:56 IST

ಚೆನ್ನೈ,ಎ.29: ಇಲ್ಲಿಯ ಒಂದನೇ ಸೆಷನ್ಸ್ ನ್ಯಾಯಾಲಯವು 2002ರ ಆಡಿಟರ್ ರಾಧಾಕೃಷ್ಣನ್ ಹಲ್ಲೆ ಪ್ರಕರಣದಲ್ಲಿ ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಮತ್ತು ಇತರ ಎಂಟು ಆರೋಪಿಗಳನ್ನು ಕೊಲೆ ಯತ್ನ ಸೇರಿದಂತೆ ಎಲ್ಲ ಆರೋಪಗಳಿಂದ ಶುಕ್ರವಾರ ಖುಲಾಸೆಗೊಳಿಸಿದೆ.

ನ್ಯಾ.ಪಿ.ರಾಜಮಾಣಿಕ್ಯಂ ಅವರು ಕಿಕ್ಕಿರಿದ ನ್ಯಾಯಾಲಯದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿದಾಗ ಎಲ್ಲ ಆರೋಪಿಗಳು ಉಪಸ್ಥಿತರಿದ್ದರು. ಮಾಫಿ ಸಾಕ್ಷಿಯಾಗಿದ್ದು ಬಳಿಕ ಪ್ರತಿಕೂಲ ಸಾಕ್ಷವನ್ನು ನುಡಿದಿದ್ದ ರವಿ ಸುಬ್ರಮಣಿಯನ್ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಪ್ರಮುಖ ಆರೋಪಿಯಾಗಿದ್ದ ಕಂಚಿ ಶ್ರೀ(80),ಕಂಚಿ ಮಠದ ಮ್ಯಾನೇಜರ್ ಸುಂದರೇಶ ಅಯ್ಯರ್ ಮತ್ತು ಕಿರಿಯ ಯತಿ ವಿಜಯೇಂದ್ರ ಸರಸ್ವತಿ ಅವರು ಕ್ರಿಮಿನಲ್ ಒಳಸಂಚು,ಕೊಲೆಯತ್ನ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ಆರೋಪಗಳನ್ನು ಎದುರಿಸುತ್ತಿದ್ದರು.

2002,ಸೆ.20ರಂದು ಕಂಚಿ ಮಠದ ಮಾಜಿ ಮ್ಯಾನೇಜರ್ ಎಸ್.ರಾಧಾಕೃಷ್ಣನ್ ಅವರ ಮನೆಗೆ ನುಗ್ಗಿದ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು. ಅವರು ಸೋಮಶೇಖರ ಗಣಪಾಡಿಗಳ್ ಎಂಬ ಸುಳ್ಳು ಹೆಸರಿನಲ್ಲಿ ಮಠದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಪತ್ರಗಳನ್ನು ಬರೆಯುತ್ತಿದ್ದಾರೆ ಎಂದು ಭಾವಿಸಿ ಆರೋಪಿಗಳು ಅವರ ವಿರುದ್ಧ ಸಂಚನ್ನು ರೂಪಿಸಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ಪೊಲೀಸರು ಒಟ್ಟೂ 12 ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪೈಕಿ ಇಬ್ಬರು ವಿಚಾರಣೆ ಸಂದರ್ಭದಲ್ಲಿ ಮೃತ ಪಟ್ಟಿದ್ದರೆ,ಇನ್ನೋರ್ವ ಆರೋಪಿ ರವಿ ಸುಬ್ರಮಣಿಯನ್ ಮಾಫಿ ಸಾಕ್ಷಿದಾರನಾಗಿ ಬದಲಾಗಿದ್ದ. 2013ರಲ್ಲಿ ಪುದುಚೇರಿಯ ನ್ಯಾಯಾಲಯವೊಂದು 2004ರಲ್ಲಿ ನಡೆದಿದ್ದ ವರದರಾಜ ದೇವಸ್ಥಾನದ ಮ್ಯಾನೇಜರ್ ಶಂಕರರಾಮನ್ ಕೊಲೆ ಪ್ರಕರಣದಲ್ಲಿ ಕಂಚಿ ಶ್ರೀ ಮತ್ತು ಕಿರಿಯ ಯತಿಗಳನ್ನು ಬಿಡುಗಡೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News