ಪ.ಬಂಗಾಳದಲ್ಲಿ ಐದನೆ ಹಂತದ ಚುನಾವಣೆ ಆರಂಭ
ಕೋಲ್ಕತಾ, ಎ.30: ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಚುನಾವಣೆಗೆ ಮತದಾನ ಇಂದು ಬೆಳಗ್ಗೆ ಆರಂಭಗೊಂಡಿದೆ. 9 ಗಂಟೆ ವೇಳೆಗೆ ಶೇ .19.64ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.
ದಕ್ಷಿಣ ಕೋಲ್ಕತಾದ ನಗರ ನಿವಾಸಿಗಳು ಸರಿಯಾದ ಕುಡಿಯುವ ನೀರು, ಆರೋಗ್ಯ ಸೌಲಭ್ಯ ಸೇರಿದಂತೆ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈ ಚುನಾವಣೆ ಸವಾಲಾಗಲಿದ್ದು, ತ್ರಿಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ ಅವರು ಭೋವಾನಿಪುರ ಕ್ಷೇತ್ರದಿಂದ ವಿಧಾನಸಭೆಗೆ ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನ ದೀಪಾ ದಾಸ್ ಮುನ್ಶಿ, ಬಿಜೆಪಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಚಂದ್ರ ಕುಮಾರ‍್ ಬೋಸ್ ಅವರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.
ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಸಚಿವ ಸಂಪುಟದ ಸಚಿವರುಗಳಾದ ಫಿರ್ಹಾದ್ ಹಕೀಂ, ಸುಬ್ರತಾ ಮುಖರ್ಜಿ, ಸಿಟಿ ಮೇಯರ‍್ ಸೊವನ್ ಚಟರ್ಜಿ ಮತ್ತು ಇಕ್ಬಾಲ್ ಅಹ್ಮದ್ ಆಯ್ಕೆ ಬಯಸಿದ್ದಾರೆ. ಇವರೆಲ್ಲರೂ ನಾರದಾ ನ್ಯೂಸ್ ಎಂಬ ಪೋರ್ಟಲ್ ಮಾಡಿದ ಕುಟುಕು ಕಾರ್ಯಾಚರಣೆಯಲ್ಲಿ ಲಂಚದ ಹಗರಣದಲ್ಲಿ ಸಿಲುಕಿಕೊಂಡಿದ್ದರು.ಅವರ ಹಣೆಬರಹವನ್ನು ಈ ಚುನಾವಣೆ ನಿರ್ಧರಿಸಲಿದೆ.
ಕೋಲ್ಕತಾ ಸೌತ್, ಸೌತ್ 24 ಪರಗಣಾ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದ್ದು, 1.2 ಕೋಟಿ ಮತದಾರರುತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. 53 ಕ್ಷೇತ್ರಗಳಲ್ಲಿ ಒಟ್ಟು 349 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಇವರಲ್ಲಿ 43 ಮಹಿಳಾ ಅಭ್ಯರ್ಥಿಗಳೂ ಸೇರಿದ್ದಾರೆ