ರಾಜಿಗೆ ಮುನ್ನ ಇಬಿಸಿ ಮೀಸಲಾತಿ ಅಧ್ಯಯನ:ಹಾರ್ದಿಕ್

Update: 2016-04-30 13:06 GMT

ಅಹ್ಮದಾಬಾದ್,ಎ.30: ಗುಜರಾತ್ ಸರಕಾರವು ಪ್ರಕಟಿಸಿರುವ ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ (ಇಬಿಸಿ) ಶೇ.10 ಮೀಸಲಾತಿಯನ್ನು ಅಧ್ಯಯನ ಮಾಡಿದ ಬಳಿಕವೇ ಕೋಟಾ ಕುರಿತು ಬಿಕ್ಕಟ್ಟನ್ನು ಅಂತ್ಯಗೊಳಿಸಲು ರಾಜಿಯ ಬಗ್ಗೆ ತಾನು ಯೋಚಿಸುವುದಾಗಿ ದೇಶದ್ರೋಹ ಆರೋಪದಲ್ಲಿ ಜೈಲು ಸೇರಿರುವ ಪಾಟಿದಾರ ಮೀಸಲು ಚಳವಳಿಯ ನಾಯಕ ಹಾರ್ದಿಕ ಪಟೇಲ್ ಶನಿವಾರ ಇಲ್ಲಿ ತಿಳಿಸಿದರು.

ಆದರೆ ಸರಕಾರದೊಂದಿಗೆ ಮಾತುಕತೆಯಲ್ಲಿ ತೊಡಗಿಕೊಂಡಿರುವ ಸಮುದಾಯದ ನಾಯಕರು ಪ್ರತಿಭಟನೆಗೆ ಅಂತ್ಯ ಹಾಡಲು ಒಲವು ವ್ಯಕ್ತಪಡಿಸಿದ್ದು, ತಮ್ಮ ಎರಡು ಮುಖ್ಯವಾದ ಬೇಡಿಕೆಗಳು ಈಡೇರಿವೆ ಎಂದು ಹೇಳಿದ್ದಾರೆ. ಇಲ್ಲಿಯ ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಟೇಲ್,ಇಬಿಸಿಗಳಿಗೆ ಶೇ.10 ಮೀಸಲಾತಿಯನ್ನು ಅಧ್ಯಯನ ಮಾಡಿದ ಬಳಿಕ ರಾಜಿಯ ಬಗ್ಗೆ ನಿರ್ಧರಿಸುತ್ತೇನೆ. ಶಾಂತಿಗಾಗಿ ಈ ಸಮಸ್ಯೆಗೆ ಪರಿಹಾರ ಅಗತ್ಯವಿದೆ ಮತ್ತು ಈ ವಿಷಯದಲ್ಲಿ ಉಭಯ ಪಕ್ಷಗಳು ರಾಜಿ ಮಾಡಿಕೊಳ್ಳುವುದು ಮಹತ್ವದ್ದಾಗಿದೆ ಎಂದರು. ಅವರನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು.


ಗುಜರಾತ್ ಸರಕಾರವು ಶುಕ್ರವಾರ ಪಾಟಿದಾರ್‌ಗಳು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲಾತಿಯನ್ನು ಪ್ರಕಟಿಸಿದ್ದು, ಸರಕಾರದ ಈ ನಿರ್ಧಾರಕ್ಕೆ ಇದು ಹಾರ್ದಿಕ ಅವರ ಪ್ರಥಮ ಪ್ರತಿಕ್ರಿಯೆಯಾಗಿದೆ. ತನ್ಮಧ್ಯೆ ಸಂಧಾನದಲ್ಲಿ ತೊಡಗಿರುವ ಪಟೇಲ್ ಸಮುದಾಯದ ನಾಯಕರು ಇಂದು ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಮುದಾಯದ ಎರಡು ಪ್ರಮುಖ ಬೇಡಿಕೆಗಳಾದ ಮೀಸಲಾತಿ ಮತ್ತು ದೇಶದ್ರೋಹದ ಆರೋಪದಲ್ಲಿ ಬಂಧಿತ ಯುವಕರ ಬಿಡುಗಡೆ ಇವುಗಳು ಈಡೇರಿರುವುದರಿಂದ ಮೀಸಲಾತಿ ಚಳವಳಿ ಅಂತ್ಯಗೊಳ್ಳಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News