ವಿವಿಐಪಿ ಹೆಲಿಕಾಪ್ಟರ್ ಹಗರಣ: ಸಿಬಿಐನಿಂದ ಐಎಎಫ್‌ನ ಮಾಜಿ ಉಪಮುಖ್ಯಸ್ಥರ ವಿಚಾರಣೆ
ಹೊಸದಿಲ್ಲಿ,ಎ.30: 3,600 ಕೋ.ರೂ.ಗಳ ಆಗಸ್ಟಾ ವೆಸ್ಟಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿ ವ್ಯವಹಾರದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಮಾಜಿ ಉಪ ಮುಖ್ಯಸ್ಥ ಜೆ.ಎಸ್.ಗುಜ್ರಾಲ್ ಅವರನ್ನು ಸಿಬಿಐ ಶನಿವಾರ ವಿಚಾರಣೆಗೊಳಪಡಿಸಿತು.
ಬೆಳಿಗ್ಗೆ ಸಿಬಿಐ ಕೇಂದ್ರ ಕಚೇರಿಯನ್ನು ತಲುಪಿದ ಏರ್ ಮಾರ್ಷಲ್(ನಿವೃತ್ತ) ಗುಜ್ರಾಲ್ ಅವರು ತನಿಖಾ ತಂಡದೆದುರು ಹಾಜರಾದರು. ಹೆಲಿಕಾಪ್ಟರ್‌ಗಳ ಖರೀದಿಗೆ ನಿಗದಿಗೊಳಿಸಲಾಗಿದ್ದ ಮಾನದಂಡಗಳನ್ನು ಬದಲಿಸಲು ನಿರ್ಧರಿಸಲಾಗಿದ್ದ 2005ರ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವಾರು ಹಿರಿಯ ಅಧಿಕಾರಿಗಳಲ್ಲಿ ಗುಜ್ರಾಲ್ ಓರ್ವರಾಗಿದ್ದರು.
ಸಿಬಿಐ ಸೋಮವಾರ ಮಾಜಿ ವಾಯುಪಡೆ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರನ್ನು ವಿಚಾರಣೆಗೊಳಪಡಿಸಲಿದೆ. ಈ ಇಬ್ಬರೂ ಅಧಿಕಾರಿಗಳನ್ನು ಅದು 2013ರಲ್ಲಿ ಸುದೀರ್ಘ ವಿಚಾರಣೆಗೊಳಪಡಿಸಿತ್ತಾದರೂ, ಇಟಲಿಯ ನ್ಯಾಯಾಲಯದ ಎ.7ರ ಆದೇಶದ ಬಳಿಕ ಮತ್ತೊಮ್ಮೆ ಅವರ ವಿಚಾರಣೆ ಅಗತ್ಯವಾಗಿದೆ.
ಗುಜ್ರಾಲ್ ಅವರನ್ನು ಸಾಕ್ಷಿದಾರನಾಗಿ ವಿಚಾರಣೆಗೊಳಪಡಿಸಲಾಗಿತ್ತು ಎಂದು ಸಿಬಿಐ ಈವರೆಗೆ ಪ್ರತಿಪಾದಿಸುತ್ತಲೇ ಬಂದಿದ್ದು, ಈಗಲೂ ಅವರು ಸಾಕ್ಷಿದಾರರಾಗಿಯೇ ಉಳಿದಿದ್ದಾರೆಯೇ ಎಂಬ ಬಗ್ಗೆ ಅದು ತುಟಿಪಿಟಕ್ಕೆಂದಿಲ್ಲ. ಸಿಬಿಐ ಈವರೆಗೆ ಅವರ ವಿರುದ್ಧ ಯಾವುದೇ ಆರೋಪವನ್ನು ಹೊರಿಸಿಲ್ಲ.