ಎಲ್ಲರಿಗೂ ನೋಟಿಸ್ ಜಾರಿ: ಜೇಟ್ಲಿ

Update: 2016-04-30 18:38 GMT

ಹೊಸದಿಲ್ಲಿ,ಎ.30: ಪನಾಮಾ ದಾಖಲೆಗಳಲ್ಲಿ ಹೆಸರಿಸಲಾಗಿರುವ ಎಲ್ಲರಿಗೂ ನೋಟಿಸುಗಳನ್ನು ಹೊರಡಿಸಲಾಗಿದೆ ಎಂದು ಶುಕ್ರವಾರ ವಿತ್ತಸಚಿವ ಅರುಣ್ ಜೇಟ್ಲಿ ಲೋಕಸಭೆಗೆ ತಿಳಿಸಿದ್ದಾರೆ. ಆದರೆ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸುವವರೆಗೆ ಕಾನೂನು ಕ್ರಮಗಳನ್ನು ಬಹಿರಂಗಗೊಳಿಸಲು ತೆರಿಗೆ ಕಾನೂನುಗಳಲ್ಲಿ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.

ತೆರಿಗೆ ವಂಚನೆ ಮತ್ತು ಕಪ್ಪುಹಣ ಕುರಿತು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು ಈ ಮಾಹಿತಿಗಳನ್ನು ನೀಡಿದರು.
 ತನ್ಮಧ್ಯೆ,ಇನ್ನೊಂದು ಪೂರಕ ಪ್ರಶ್ನೆಗೆ ಉತ್ತರಿಸಿದ ಸಹಾಯಕ ವಿತ್ತಸಚಿವ ಜಯಂತ ಸಿನ್ಹಾ ಅವರು, ಸರಕಾರವು ಎಚ್‌ಎಸ್‌ಬಿಸಿ ಮತ್ತು ಪನಾಮಾದಿಂದ ಪಡೆದುಕೊಂಡಿರುವ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ವಿದೇಶಿ ಕಪ್ಪುಹಣ ಕುರಿತ ಕಾನೂನು ಸೇರಿದಂತೆ ವಿವಿಧ ಕಾನೂನುಗಳನ್ನು ಅನ್ವಯಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಪನಾಮಾ ದಾಖಲೆಗಳ ಸೋರಿಕೆಯ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಆದಾಯ ತೆರಿಗೆ ಇಲಾಖೆಯು ಸಾಗರೋತ್ತರ ತೆರಿಗೆ ಸ್ವರ್ಗಗಳಲ್ಲಿ ಆಸ್ತಿಗಳನ್ನು ಹೊಂದಿರುವ ಸುಮಾರು 50 ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ವಿವರವಾದ ಪ್ರಶ್ನಾವಳಿಯನ್ನು ಕಳುಹಿಸಿದೆ ಎಂದು ಮೂಲಗಳು ಈ ಹಿಂದೆ ತಿಳಿಸಿದ್ದವು. ಪ್ರತಿಷ್ಠಿತ ಉದ್ಯಮಿಗಳು,ಚಿತ್ರರಂಗದ ಗಣ್ಯರು ಮತ್ತು ಲಾಭದಾಯಕ ವೃತ್ತಿಗಳಲ್ಲಿರುವವರು ಸೇರಿದಂತೆ ಸುಮಾರು 500 ಭಾರತೀಯರನ್ನು ಪನಾಮಾ ದಾಖಲೆಗಳಲ್ಲಿ ಹೆಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News