ರಾಮಮಂದಿರ ಉ.ಪ್ರದೇಶ ಚುನಾವಣಾ ವಿಷಯವಲ್ಲ: ಬಿಜೆಪಿ
Update: 2016-05-01 00:36 IST
ಬಲಿಯಾ (ಉ.ಪ್ರ), ಎ.30: ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಮಮಂದಿರವು ಒಂದು ವಿಷಯವಾಗದೆಂದು ಒತ್ತಿ ಹೇಳಿರುವ ಬಿಜೆಪಿ, ಚುನಾವಣೆಯನ್ನು ಅಭಿವೃದ್ಧಿಯ ವಿಚಾರದಲ್ಲಿ ಎದುರಿಸಲಾಗುವುದು ಎಂದಿದೆ. ರಾಮ ಮಂದಿರವು ನಮ್ಮ ನಂಬಿಕೆಯ ಕೇಂದ್ರವಾಗಿದೆ. ನಾವೆಲ್ಲರೂ ರಾಮ ಮಂದಿರ ನಿರ್ಮಾಣವಾಗಬೇಕೆಂದು ಬಯಸುತ್ತಿದ್ದೇವೆ. ಆದರೆ, ಉತ್ತರ ಪ್ರದೇಶದ ಮುಂದಿನ ಚುನಾವಣೆಗೆ ಅದು ವಿಷಯವಾಗದೆಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಓಂ ಮಾಥುರ್ ಇಂದಿಲ್ಲಿ ಪತ್ರಕರ್ತರಿಗೆ ತಿಳಿಸಿದರು. ಪಕ್ಷವು ಸಮಾನ ನಾಗರಿಕ ಸಂಹಿತೆ ಹಾಗೂ ‘ಭಾರತ್ ಮಾತಾಕಿ ಜೈ’ ಘೋಷಣೆಯನ್ನು ಚುನಾವಣಾ ವಿಷಯವಾಗಿಸುವುದಿಲ್ಲ. ಅದು ಅಭಿವೃದ್ಧಿ, ಸಮಾಜವಾದಿ ಪಕ್ಷದ ಸರಕಾರದ ವೈಫಲ್ಯ ಹಾಗೂ ಕಾನೂನು-ಸುವ್ಯವಸ್ಥೆಯ ವಿಷಯಗಳಲ್ಲಿ ಹೋರಾಡುವುದೆಂದು ಅವರು ಹೇಳಿದರು.