ಯಥಾಸ್ಥಿತಿ ಇದೆ, ಇನ್ನಷ್ಟು ಕೆಟ್ಟದಾಗಿದೆ ಎಂದ ಅರ್ಧಕ್ಕಿಂತ ಹೆಚ್ಚು ಮಂದಿ
ಮುಂಬೈ, ಮೇ 1: ಮೋದಿ ಪವಾಡದ ಬಗ್ಗೆ ಎನ್‌ಡಿಎ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೆ, ಜನಾಭಿಪ್ರಾಯ ಮಾತ್ರ ಮೋದಿ ಬಂದ ಬಳಿಕ ಯಾವ ಬದಲಾವಣೆಯೂ ಆಗಿಲ್ಲ ಎಂದು ಹೇಳುತ್ತದೆ.
ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಶೇಕಡ 49 ರಷ್ಟು ಮಂದಿ ಮೋದಿ ಸರ್ಕಾರದ ಅವಧಿಯಲ್ಲಿ ಜನರ ಜೀವನ ಮಟ್ಟದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂದು ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಶೇಕಡ 15 ರಷ್ಟು ಮಂದಿ, ಮೋದಿ ಆಡಳಿತದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಹೇಳಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ನಡೆಸಿದ ಈ ಸಮೀಕ್ಷೆಯಲ್ಲಿ, ಶೇಕಡ 43 ರಷ್ಟು ಮಂದಿ, ಮೋದಿ ಸರ್ಕಾರದ ಯೋಜನೆಗಳಿಂದ ಬಡವರಿಗೆ ಯಾವ ಪ್ರಯೋಜನವೂ ಆಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಪಿಟಿಐ ಸುದ್ದಿಸಂಸ್ಥೆ ನಡೆಸಿದ ಸಾಧನೆ ಮೌಲ್ಯಮಾಪನ ವರದಿಯ ಪ್ರಕಾರ, ಶೇಕಡ 62ರಷ್ಟು ಮಂದಿ ಮೋದಿ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಶೇಕಡ 70 ರಷ್ಟು ಮಂದಿ, ಅವರು ಪ್ರಧಾನಿಯಾಗಿ ಐದು ವರ್ಷಕ್ಕಿಂತ ಹೆಚ್ಚು ಅವಧಿಗೆ ಇರಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ದೇಶದ 15 ರಾಜ್ಯಗಳ ನಗರ ಪ್ರದೇಶಗಳಲ್ಲಿ ಸುಮಾರು ನಾಲ್ಕು ಸಾವಿರ ಮಂದಿಯ ಅಭಿಪ್ರಾಯವನ್ನು ಈ ಸಮೀಕ್ಷೆಯಲ್ಲಿ ಕ್ರೋಢೀಕರಿಸಲಾಗಿದೆ. ಮೂರನೇ ಒಂದರಷ್ಟು ಮಂದಿ, ಮೋದಿ ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆಗಳನ್ನು ಪೂರೈಸಿದ್ದಾರೆ ಎಂದು ಹೇಳಿದರೆ, ಶೇಕಡ 48 ರಷ್ಟು ಮಂದಿ, "ಭಾಗಶಃ ಪೂರೈಸಿದ್ದಾರೆ" ಎಂಬ ಸರ್ಟಿಫಿಕೆಟ್ ನೀಡಿದ್ದಾರೆ.
ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಸ್ ಸಿ.ಕಶ್ಯಪ್ ಈ ಸಮೀಕ್ಷಾ ವರದಿ ಬಿಡುಗಡೆ ಮಾಡಿದರು.