×
Ad

ನ್ಯಾಯಾಲಯಕ್ಕೆ ಮೊರೆ ಹೋದ ಬ್ಯಾಂಕ್ ಅಧಿಕಾರಿ

Update: 2016-05-01 09:00 IST

ಹೊಸದಿಲ್ಲಿ, ಮೇ 1: ಭಾರತದ ಸಂವಿಧಾನದಲ್ಲಿ ನೀಡಿರುವ ಬದುಕುವ ಹಕ್ಕು, "ಆನ್‌ಲೈನ್ ಮರೆಯುವ" ಹಕ್ಕನ್ನೂ ನೀಡಿದೆಯೇ? ದೆಹಲಿ ಹೈಕೋರ್ಟ್ ಈ ಜಿಜ್ಞಾಸೆಯ ಕಾನೂನಾತ್ಮಕ ತೀರ್ಮಾನಕ್ಕೆ ಮುಂದಾಗಿದ್ದು, ಈ ಬಗ್ಗೆ ಕೇಂದ್ರದ ಸ್ಪಷ್ಟನೆ ಕೇಳಿದೆ. ಜತೆಗೆ ಗೂಗಲ್ ಹಾಗೂ ಇನ್ನೊಂದು ಆನ್‌ಲೈನ್ ಕಾನೂನು ಸಲಹಾ ಸಂಸ್ಥೆಯ ಅಭಿಪ್ರಾಯವನ್ನೂ ಆಹ್ವಾನಿಸಿದೆ.

ದೆಹಲಿಯ ಬ್ಯಾಂಕ್ ಅಧಿಕಾರಿಯೊಬ್ಬರು ಎಲ್ಲ ಆನ್‌ಲೈನ್ ಸರ್ಚ್ ಎಂಜಿನ್‌ಗಳಿಂದ ತಮ್ಮ ವೈಯಕ್ತಿಕ ಮಾಹಿತಿಯನ್ನು ಕಿತ್ತುಹಾಕಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ. ಆನ್‌ಲೈನ್‌ನಿಂದ ಅಜ್ಞಾತವಾಗಿರಲು ಅವಕಾಶ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಯೂರೋಪಿಯನ್ ನ್ಯಾಯಾಲಯ ಗೂಗಲ್ ಹಾಗೂ ಮಾರಿಯೊ ಕೊಸ್ಟೆಜಾ ಪ್ರಕರಣದಲ್ಲಿ ನೀಡಿದ ತೀರ್ಪಿನ ಅನ್ವಯ "ಮರೆಯುವ ಹಕ್ಕನ್ನು" ಮಾನ್ಯ ಮಾಡಬೇಕು ಎಂದು ಕೋರಿದ್ದಾರೆ.

ಈ ಹಕ್ಕಿನ ಅನ್ವಯ ವ್ಯಕ್ತಿಗಳು ಸರ್ಚ್ ಎಂಜಿನ್‌ಗಳಾದ ಗೂಗಲ್, ಯಾಹೂ ಹಾಗೂ ಬಿಂಗ್‌ಗಳಿಂದ ತಮ್ಮ ವೈಯಕ್ತಿಕ ವಿವರಗಳನ್ನು ತೆಗೆದು ಹಾಕುವಂತೆ ಕೋರಲು ಅವಕಾಶವಿದೆ. ಕೆಲ ನಿರ್ದಿಷ್ಟ ವಿಷಯಗಳನ್ನು ಮೂರನೇ ವ್ಯಕ್ತಿ ತಿಳಿದುಕೊಳ್ಳುವುದನ್ನು ತಡೆಯಲು ಇದು ಅನುಕೂಲ ಕಲ್ಪಿಸುತ್ತದೆ.

"ನನ್ನ ವೈವಾಹಿಕ ವ್ಯಾಜ್ಯದ ವಿವರಗಳಿಂದಾಗಿ ನಾನು ಹತಾಶನಾಗಿದ್ದೇನೆ. ಇದು ನ್ಯಾಯಾಲಯದಲ್ಲಿ ಹಲವು ವರ್ಷ ಹಿಂದೆಯೇ ಇತ್ಯರ್ಥವಾಗಿದ್ದರೂ, ಆನ್‌ಲೈನ್‌ನಲ್ಲಿ ಹಾಗೆಯೇ ಉಳಿಸಲಾಗಿದೆ. ಇಂಡಿಯನ್ ಕಾನೂನ್ ಎಂಬ ವೆಬ್‌ಸೈಟ್ ಈ ಮಾಹಿತಿಯನ್ನು ಉಲ್ಲೇಖಿಸಿ ಇನ್ನೂ ವಿವಾದ ಇದೆ ಎಂದು ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಇತರ ವಿವರಗಳೂ ಗೂಗಲ್ ಹಾಗೂ ಇತರ ಸರ್ಚ್ ಎಂಜಿನ್‌ಗಳಲ್ಲಿ ಲಭ್ಯವಿದೆ ಎಂದು ವಿವರಿಸಿದ್ದಾರೆ.
ಸೆಪ್ಟೆಂಬರ್ 19 ರೊಳಗೆ ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಗೂಗಲ್‌ಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News