ದೆಹಲಿ ಎಲ್ಜಿ ಮೂಲಕ ರಾಷ್ಟ್ರಪತಿ ಆಡಳಿತ ಎಂದು ಸುಪ್ರೀಂ ಕೋರ್ಟ್ ಗೆ ಹೇಳಿಕೆ

Update: 2016-05-01 03:39 GMT

ಹೊಸದಿಲ್ಲಿ, ಮೇ 1: ಅಧಿಕಾರ ಹಂಚಿಕೆ ಸಂಬಂಧ ಕೇಂದ್ರದ ಜತೆ ವಿರಸ ಹೊಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಗಾಯದ ಮೇಲೆ ಮತ್ತೆ ಕೇಂದ್ರ ಸರ್ಕಾರ ಉಪ್ಪು ಸವರಿದೆ.

ದೆಹಲಿಯಲ್ಲಿ ಚುನಾಯಿತ ಸರ್ಕಾರ ಇದ್ದರೂ, ದೆಹಲಿ ಇನ್ನೂ ಕೇಂದ್ರಾಡಳಿತ ಪ್ರದೇಶವಾಗಿಯೇ ಉಳಿದಿದ್ದು, ಲೆಫ್ಟಿನೆಂಟ್ ಗವರ್ನರ್ ಮೂಲಕ ರಾಷ್ಟ್ರಪತಿಗಳೇ ಆಡಳಿತ ನಡೆಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.

"ಸುಪ್ರೀಂಕೋರ್ಟ್ ಬಹುಶಃ ಕಣ್ತಪ್ಪಿನಿಂದ ದೆಹಲಿಯನ್ನು ಕೂಡಾ ಹಿಮಾಚಲ ಪ್ರದೇಶ, ಮಿಜೋರಾಂ, ಅರುಣಾಚಲ ಪ್ರದೇಶ, ತ್ರಿಪುರಾ ಹಾಗೂ ನಾಗಾಲ್ಯಾಂಡ್‌ನಂತೆ ರಾಜ್ಯವಾಗಿ ಪರಿಗಣಿಸಿ, ರಾಜ್ಯ ಮಾನವಹಕ್ಕು ಆಯೋಗ ರಚಿಸುವಂತೆ ಸೂಚನೆ ನೀಡಿರಬೇಕು" ಎಂದು ಕೇಂದ್ರದ ಗೃಹ ಸಚಿವಾಲಯ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಲಾಗಿದೆ.

ಸುಪ್ರೀಂಕೋರ್ಟ್, ಕೇಂದ್ರಾಡಳಿತ ಪ್ರದೇಶದಲ್ಲಿ ಮಾನವ ಹಕ್ಕು ಕಾಯ್ದೆ ಅಥವಾ ರಾಜ್ಯ ಮಾನವಹಕ್ಕು ಕಾಯ್ದೆ ಬಗ್ಗೆ ನಿರ್ದೇಶನ ನೀಡಿಲ್ಲ. ದೆಹಲಿ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಿರುವುದು ಕಣ್ತಪ್ಪಿನಿಂದ ಇರಬೇಕು. ದೆಹಲಿ ಇನ್ನೂ ಕೇಂದ್ರಾಡಳಿತ ಪ್ರದೇಶ" ಎಂದು ಸ್ಪಷ್ಟಪಡಿಸಲಾಗಿದೆ.

ರಾಷ್ಟ್ರ ರಾಜಧಾನಿ ಪ್ರಾಂತ್ಯದ ಆಡಳಿತ ಕೇಂದ್ರದ ಹೊಣೆಯಾಗಿದ್ದು, ಇಲ್ಲಿ ರಾಜ್ಯ ಸರ್ಕಾರ ಎನ್ನುವುದು ಇಲ್ಲ. ಇದರಿಂದ ಕೇಂದ್ರದ ಅಧಿಕಾರ ವ್ಯಾಪ್ತಿಗೇ ಇದು ಒಳಪಡುತ್ತದೆ. ಸಂವಿಧಾನದ 239 (1) ವಿಧಿ ಅನ್ವಯ ರಾಷ್ಟ್ರಪತಿಗಳು ನೇಮಿಸಿದ ಲೆಫ್ಟಿನೆಂಟ್ ಗವರ್ನರ್ ಇದರ ಆಡಳಿತದ ಹೊಣೆ ನಿರ್ವಹಿಸುತ್ತಾರೆ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News