ಪ್ರಧಾನಿ ಮೋದಿ ಗುಜರಾತ್ ವಿವಿಯಿಂದ ರಾಜಕೀಯ ಶಾಸ್ತ್ರದಲ್ಲಿ ಎಂ.ಎ ,ಫಸ್ಟ್‌ಕ್ಲಾಸ್‌ನಲ್ಲಿ ಪಾಸ್...!
ಹೊಸದಿಲ್ಲಿ, ಮೇ 1: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶೈಕ್ಷಣೆಕ ಅರ್ಹತೆ ಏನು? ಎನ್ನುವ ವಿಚಾರ ಅರಿಯಲು ದೇಶದ ನಾಗರಿಕರು ಕುತೂಹಲದಿಂದ ಕಾಯುತ್ತಿದ್ದಂತೆ ’ಅಹ್ಮದಾಬಾದ್ ಮಿರರ್’ ಪತ್ರಿಕೆ ಮೋದಿ ಅವರ ಶೈಕ್ಷಣಿಕ ಅರ್ಹತೆಯನ್ನು ಬಹಿರಂಗಗೊಳಿಸಿದೆ. ಪ್ರಧಾನಿ ಮೋದಿ ಅವರು ಗುಜರಾತ್ ವಿವಿಯಿಂದ ರಾಜಕೀಯ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಮೋದಿ ಫಸ್ಟ್‌ಕ್ಲಾಸ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ದಿಲ್ಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಹಿತಿ ಹಕ್ಕು ಆಯೋಗದ ಆಯುಕ್ತ ಸುಧೀರ್ ಆಚಾರ್ಯಲು ಅವರಿಗೆ ಮನವಿ ಸಲ್ಲಿಸಿ ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಮಾಹಿತಿ ಕೇಳಿದ್ದರು.
ಮುಖ್ಯಮಂತ್ರಿ ಕೇಜ್ರಿವಾಲ್ ಮನವಿಯಂತೆ ಕೇಂದ್ರ ಮಾಹಿತಿ ಆಯೋಗವು ಶುಕ್ರವಾರ ದಿಲ್ಲಿ ಮತ್ತು ಗುಜರಾತ್ ವಿವಿಗೆ ಪತ್ರ ಬರೆದು ಮೋದಿ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಮಾಹಿತಿ ನೀಡುವಂತೆ ಆದೇಶ ನೀಡಿತ್ತು.
ಗುಜರಾತ್ ವಿವಿ ಒದಗಿಸಿರುವ ಮಾಹಿತಿಯಂತೆ ಪ್ರಧಾನಿ ಮೋದಿ ಗುಜರಾತ್ ವಿವಿಗೆ ಬಾಹ್ಯ ವಿದ್ಯಾರ್ಥಿಯಾಗಿ ರಾಜಕೀಯ ಶಾಸ್ತ್ರದಲ್ಲಿ ಎಂ.ಎ. ಪರೀಕ್ಷೆ ತೆಗದುಕೊಂಡು 1982ರಲ್ಲಿ ಶೇ. 62.3 ಅಂಕಗಳೊಂದಿಗೆ ಪಾಸಾಗಿದ್ದರು. ಸ್ನಾತಕೋತ್ತರ ಪದವಿಯಲ್ಲಿ ಯುರೋಪಿಯನ್ ರಾಜಕೀಯ, ಭಾರತೀಯ ರಾಜಕೀಯ ವಿಶ್ಲೇಷಣೆ ಮತ್ತು ರಾಜಕೀಯ ಸೈಕಾಲಜಿ ಒಳಗೊಂಡಿತ್ತು . ವಿಶ್ವವಿದ್ಯಾಲಯ, ಆದಾಗ್ಯೂ, ಪ್ರಧಾನಿ ಪದವಿ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಮೋದಿ ವಿಸ್ನಾಗರದ ಎಂ.ಎನ್ ವಿಜ್ಞಾನ ಕಾಲೇಜಿನಲ್ಲಿ ಪ್ರಿಸೈನ್ಸ್(ಭವಿಷ್ಯಜ್ಞಾನ) ಪೂರ್ಣಗೊಳಿಸಿದ್ದಾರೆ.
ಪ್ರಿಸೈನ್ಸ್ ಒಂದು ವರ್ಷದ ಕೋರ್ಸ್. ಹನ್ನೆರಡನೆ ತರಗತಿಗೆ ಸಮಾನ. ಕುತೂಹಲ ಕೆರಳಿಸಿರುವ ವಿಚಾರವೆಂದರೆ ಮೋದಿ ಪ್ರಿಸೈನ್ಸ್ ವಿದ್ಯಾರ್ಥಿಯಾಗಿದ್ದಾಗ ಅವರ ರಾಜಕೀಯ ಆಪ್ತರಾದ ಗುಜರಾತ್ ಮುಖ್ಯ ಮಂತ್ರಿ ಆನಂದಿಬೆನ್ ಅದೇ ಕಾಲೇಜಿನಲ್ಲಿ ಎರಡನೇ ವರ್ಷದ ಎಂ.ಎಸ್ಸಿ ಅಜೈವಿಕ ರಸಾಯನಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದರು. ಇಬ್ಬರ ರೋಲ್ ನಂಬ್ರ 71ಆಗಿತ್ತು. ಇಬ್ಬರೂ ರೋಲ್ ಸಂಖ್ಯೆ ಹಂಚಿಕೊಂಡಿದ್ದಾರೆ ಎನ್ನುವುದು ವಿಶೇಷ.
ದಿಲ್ಲಿ ಮತ್ತು ಗುಜರಾತ್ ವಿವಿಗಳು ಮೋದಿ ಅವರ ಪದವಿ ಬಗ್ಗೆ ಕೇಳಿರುವ ಆರ್‌ಟಿಐ ಅರ್ಜಿಯನ್ನು ತಿರಸ್ಕರಿಸಿದೆ.
ಮೋದಿ ದಿಲ್ಲಿ ವಿವಿ ವಿದ್ಯಾರ್ಥಿಯಾಗಿದ್ದರು ಎನ್ನುವ ಬಗ್ಗೆ ಯಾವುದೇ ಮಾಹಿತಿ ’ಅಹ್ಮದಾಬಾದ್ ಮಿರರ್’ಗೆ ಸಿಕ್ಕಿಲ್ಲ.
ಮೋದಿ ಅಧಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯಂತೆ ಮೋದಿ 1978ರಲ್ಲಿ ದಿಲ್ಲಿ ವಿವಿಯಿಂದ ಬಿ.ಎ ಪದವಿ ಪಡೆದಿದ್ದರು.ಆದರೆ ಪ್ರಧಾನ ಮಂತ್ರಿಗಳ ಕಾರ್ಯಾಲಯವು ಆರ್ ಟಿಐ ಮೂಲಕ ಸಲ್ಲಿಸಿರುವ ಅರ್ಜಿಗೆ ಈ ವರೆಗೂ ಯಾವುದೇ ಮಾಹಿತಿ ನೀಡಿಲ್ಲ.
ಗುಜರಾತ್ ವಿವಿ ಉಪಕುಲಪತಿ ಎಂ.ಎನ್ ಪಟೇಲ್ ಒದಗಿಸಿರುವ ಮಾಹಿತಿಯಂತೆ ಮೋದಿ ಎಂಎ ಪ್ರಥಮ ವರ್ಷದ ಪದವಿಯಲ್ಲಿ 400ರಲ್ಲಿ 237 ಅಂಕಗಳನ್ನು , ಎಂಎ ಎರಡನೆ ವರ್ಷದ ಪದವಿಯಲ್ಲಿ 400ರಲ್ಲಿ 262 ಅಂಕ ಪಡೆದಿದ್ದಾರೆ. ಒಟ್ಟು 800ರಲ್ಲಿ 499 ಅಂಕಗಳನ್ನು ಗಳಿಸಿದ್ದರು.