×
Ad

ಮೋದಿ ಫಸ್ಟ್‌ಕ್ಲಾಸ್: ರಾಜಕಾರಣಿಯಾಗಿ ಅಲ್ಲ; ವಿದ್ಯಾರ್ಥಿಯಾಗಿ!

Update: 2016-05-01 13:09 IST

ಅಹ್ಮದಾಬಾದ್, ಮೇ 1: ಪ್ರಧಾನಿಯಾಗಿ ಮೊದಲ ಎರಡು ವರ್ಷದ ಅವಧಿಯಲ್ಲಿ ಸಮೀಕ್ಷೆಗಳ ಪ್ರಕಾರ, ಮೋದಿ ಸಾಧನೆ ಗಮನಾರ್ಹವಾಗಿಲ್ಲವಾದರೂ, ಮೋದಿಪ್ರಿಯರಿಗೆ ಸಂತೋಷದ ಸುದ್ದಿಯೊಂದಿದೆ. ಅದೆಂದರೆ ಮೋದಿ ಫಸ್ಟ್‌ಕ್ಲಾಸ್ ವಿದ್ಯಾರ್ಥಿ ಎನ್ನುವುದು.

ಮೋದಿ ಶೈಕ್ಷಣಿಕ ಅರ್ಹತೆ ಬಗೆಗೆ ಇದ್ದ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದ್ದು, ರಾಜಕೀಯ ಶಾಸ್ತ್ರ ವಿಷಯದಲ್ಲಿ ಮೋದಿ ಪ್ರಥಮ ದರ್ಜೆಯೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂಬ ಅಂಶ ಸುಧೀರ್ಘ ಮಾಹಿತಿ ಹಕ್ಕು ಹೋರಾಟದ ಬಳಿಕ ಇದೀಗ ಬಹಿರಂಗಾಗಿದೆ. ತಮ್ಮ ಕಡುವೈರಿಯ ಶೈಕ್ಷಣಿಕ ಅರ್ಹತೆ ಬಗೆಗೆ ಮಾಹಿತಿ ಹಕ್ಕು ಆಯುಕ್ತ ಶ್ರೀಧರ್ ಆಚಾರ್ಯಲು ಅವರಿಂದ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ಕೋರಿದ್ದರು.

ಕೇಂದ್ರ ಮಾಹಿತಿ ಆಯೋಗ ಶುಕ್ರವಾರ ತೀರ್ಪು ನೀಡಿ, ಮೋದಿ ಶೈಕ್ಷಣಿಕ ಅರ್ಹತೆ ವಿವರಗಳನ್ನು ಬಹಿರಂಗಪಡಿಸುವಂತೆ ದೆಹಲಿ ಹಾಗೂ ಗುಜರಾತ್ ವಿವಿಗಳಿಗೆ ಸೂಚನೆ ನೀಡಿತ್ತು. ಈ ವಿಷಯದಲ್ಲಿ ಮಾಹಿತಿಹಕ್ಕು ಆಯೋಗದ ನಿರ್ಲಕ್ಷ್ಯ ವಿರುದ್ಧ ಕೇಜ್ರಿವಾಲ್ ಕಿಡಿಕಾರಿದ ಬೆನ್ನಲ್ಲೇ ಈ ಆದೇಶ ಹೊರಬಿದಿದ್ದೆ.

ಕೇಜ್ರಿವಾಲ್ ಅವರು ಕೋರಿದ ಮಾಹಿತಿಯನ್ನು ಆರ್‌ಟಿಐ ಅರ್ಜಿ ಎಂದು ಪರಿಗಣಿಸಿ, ಅವರು ಕೋರಿದ ಎಲ್ಲ ಮಾಹಿತಿ ನೀಡುವಂತೆ ಪ್ರಧಾನಿ ಕಚೇರಿಗೆ ಕೇಂದ್ರ ಮಾಹಿತಿ ಆಯೋಗ ಸೂಚನೆ ನೀಡಿದೆ. ಗುಜರಾತ್ ವಿವಿ ಬಿಡುಗಡೆ ಮಾಡಿದ ಮಾಹಿತಿಯಂತೆ 1983ರಲ್ಲಿ ರಾಜಕೀಯ ಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಮೋದಿ ಶೇಕಡ 62.3 ಅಂಕಗಳನ್ನು ಪಡೆದಿದ್ದಾರೆ. ಇದರಲ್ಲಿ ಯೂರೋಪ್ ರಾಜಕೀಯ, ಭಾರತದ ರಾಜಕೀಯ ವಿಶ್ಲೇಷಣೆ ಹಾಗೂ ರಾಜಕೀಯ ಮನಃಶಾಸ್ತ್ರ ಸೇರಿತ್ತು. ಆದರೆ ಮೋದಿಯವರ ಪದವಿ ತರಗತಿಯ ವಿವರಗಳು ವಿಶ್ವವಿದ್ಯಾನಿಲಯದ ಬಳಿ ಇಲ್ಲ. ಇದಕ್ಕೂ ಮುನ್ನ ಮೋದಿ ವಿಸ್ನಾಗರ್‌ನ ಎಂ.ಎನ್.ವಿಜ್ಞಾನ ಕಾಲೇಜಿನಲ್ಲಿ ಪದವಿಪೂರ್ವ ಕೋರ್ಸ್ ಪೂರೈಸಿದ್ದಾರೆ. ಬಾಹ್ಯ ವಿದ್ಯಾರ್ಥಿಯಾಗಿ ಮೋದಿ ಸ್ನಾತಕೋತ್ತರ ಪದವಿ ಪರೀಕ್ಷೆ ತೆಗೆದುಕೊಂಡಿದ್ದರು.
ಆದರೆ 1978ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಮೋದಿ ಬಿಎ ಪದವಿ ಪಡೆದಿದ್ದಾರೆ ಎನ್ನಲಾಗಿದ್ದು, ಇದರ ವಿವರಗಳು ಇನ್ನೂ ಲಭ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News