ವಿವಿ ದಾಖಲೆ ಮೂಲಕ ಹಠಾತ್ತನೆ ಒಂದು ವರ್ಷ ಹಿರಿಯರಾದ ಪ್ರಧಾನಿ ಮೋದಿ!
ಹೊಸದಿಲ್ಲಿ, ಮೇ 1: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆ ಕುರಿತಂತೆ ಕೇಳಿದ ಮಾಹಿತಿಯನ್ನು ಗುಜರಾತ್ ಹಾಗೂ ದೆಹಲಿ ವಿವಿ ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವಾದರೂ, ಪತ್ರಿಕೆಯೊಂದು ಅವರ ಸ್ನಾತಕೋತ್ತರ ಪದವಿ ವಿವರಗಳ ಬಗ್ಗೆ ಮಾಹಿತಿ ಪಡೆದಿರುವುದಾಗಿ ಹೇಳಿಕೊಂಡಿದೆ.
ಟೈಮ್ಸ್ ಆಫ್ ಇಂಡಿಯಾ ಈ ಮಾಹಿತಿ ಕಲೆ ಹಾಕಿದ್ದು, 1083ರಲ್ಲಿ ರಾಜಕೀಯ ಶಾಸ್ತ್ರದಲ್ಲಿ ಶೇಕಡ 62.3 ಅಂಕದೊಂದಿಗೆ ತೇರ್ಗಡೆಯಾಗಿರುವುದಾಗಿ ಹೇಳಲಾಗಿದೆ. ಮೋದಿ ತಮ್ಮ ವಿಜ್ಞಾನಪೂರ್ವ ಕೋರ್ಸ್ ಮಾಡುತ್ತಿದ್ದಾಗ, ಅವರ ರಾಜಕೀಯ ಸಹವರ್ತಿಯಾಗಿರುವ ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ದ್ವಿತೀಯ ವರ್ಷದ ಎಂಎಸ್ಸಿ ಪದವಿಯಲ್ಲಿ ಇದ್ದುದಾಗಿಯೂ ಹೇಳಲಾಗಿದೆ. ಈ ದಾಖಲೆಗಳ ಪ್ರಕಾರ ಇಬ್ಬರ ನೊಂದಣಿ ಸಂಖ್ಯೆ ಕೂಡಾ 71 ಆಗಿತ್ತು.
ಆದರೆ ವಿಶ್ವವಿದ್ಯಾನಿಲಯದಿಂದ ಸೋರಿಕೆಯಾಗಿದೆ ಎನ್ನಲಾದ ಮಾಹಿತಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವುಗಳಲ್ಲಿ ಮುಖ್ಯವಾದ್ದೆಂದರೆ, ಮೋದಿಯವರ ಜನ್ಮದಿನಾಂಕಕ್ಕೆ ಸಂಬಂಧಿಸಿದ್ದು. ಅವರ ಅಧಿಕೃತ ವೆಬ್‌ಸೈಟ್ ಪ್ರಕಾರ ಅವರ ಜನ್ಮದಿನಾಂಕ 1950ರ ಸೆಪ್ಟೆಂಬರ್ 17. ಆದರೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ದಾಖಲೆಯ ಪ್ರಕಾರ, ಮೋದಿ ಜನ್ಮದಿನ 1949ರ ಆಗಸ್ಟ್ 29!
ಆರ್‌ಟಿಐ ಕಾರ್ಯಕರ್ತ ರೋಷನ್ ಷಹಾ ಪ್ರಕಾರ, ಗುಜರಾತ್ ವಿವಿ ಮೋದಿ ದಾಖಲೆಗಳನ್ನು ತಿದ್ದಿದೆ. ಪತ್ರಿಕೆ ಛಾಯಾಚಿತ್ರ ತೆಗೆದ ಹಾಳೆ ಅತ್ಯಂತ ಬಿಳಿ ಹಾಳೆಯಾಗಿದ್ದು, ವಾಸ್ತವವಾಗಿ 30 ವರ್ಷಗಳಿಗೂ ಹೆಚ್ಚು ಅವಧಿ ಮುಗಿದ ಬಳಿಕ ಕಾಗದ ಹಳದಿ ಟಿಂಟ್ ಪಡೆಯುತ್ತದೆ. ಸುಲಭವಾಗಿ ತಿದ್ದಲು ಅವಕಾಶವಿದ್ದು, ಗುಜರಾತ್ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೆಹಲಿ ಇದನ್ನೇ ಅನುಸರಿಸುತ್ತದೆ. ಅಹ್ಮದಾಬಾದ್ ಮಿರರ್ ವರದಿಯ ಪ್ರಕಾರ, ಮೋದಿ ಜನ್ಮದಿನಾಂಕ 1950ರ ಸೆಪ್ಟೆಂಬರ್ 17 ಎನ್ನಲಾಗಿದೆ. ಆದರೆ ದಾಖಲೆಗಳ ಪ್ರಕಾರ ಅದು 29.08.49 ಎಂದಿದೆ. ಆದ್ದರಿಂದ ಈ ವಿವಾದ ಸೃಷ್ಟಿಯಾಗಿದೆ. ಮೋದಿಯವರ ಸಹಪಾಠಿ ಎನ್ನಲಾದ ದಶರಥರಾಲ್ ಪಂಖಿ ಅವರನ್ನು ಸಂಪರ್ಕಿಸಿದಾಗ, ಎಂಟನೇ ತರಗತಿಯಲ್ಲೇ ಶಾಲೆ ಬಿಟ್ಟಿರುವುದಾಗಿ ತಿಳಿಸಿದರು.
ಮತ್ತೊಬ್ಬ ಫೇಸ್‌ಬುಕ್ ಬಳಕೆದಾರ ಪಂಕಜ್ ಜೈನ್, "ಉತ್ತಮ ಶಿಕ್ಷಣ ಸುಧಾರಣೆ. ಬಿಎ ಆಗದೇ ಎಂಎ. ಒಂದು ಸಂದರ್ಶನದಲ್ಲಿ ಮೋದಿಗೆ ತಾವು ಇದನ್ನು ಮಾಡಿದ್ದೇ ಮರೆತು ಹೋಗಿತ್ತು. ನಾನು ಕೇವಲ ಹತ್ತನೇ ತರಗತಿ ಓದಿದ್ದಾಗಿ ಹೇಳಿದ್ದರು. ಈ ಕುರಿತ ವಿಡಿಯೊ ಶೇರ್ ಮಾಡುತ್ತೇನೆ" ಎಂದು ಹೇಳಿದ್ದಾರೆ. ಹತ್ತನೇ ತರಗತಿ ಆದ ಬಳಿಕ ಶಾಲೆ ಬಿಟ್ಟಿದ್ದಾಗಿ ಮೋದಿ ಇದರಲ್ಲಿ ಹೇಳಿಕೊಂಡಿದ್ದಾರೆ.