×
Ad

ಟೂತ್ ಬ್ರಶನ್ನೇ ನುಂಗಿ ಒಂದು ವರ್ಷ ಬಾಯಿ ಬಿಡದ ಐದು ವರ್ಷದ ಪೋರ!

Update: 2016-05-01 21:02 IST

ರಾಯಪುರ: ಇಲ್ಲಿಗೆ ಸಮೀಪದ ದಾಂತ್ರಿ ಎಂಬಲ್ಲಿ ಐದು ವರ್ಷದ ಬಾಲಕ ಟೂತ್ ಬ್ರಶನ್ನೇ ನುಂಗಿ ಒಂದು ವರ್ಷದ ವರೆಗೂ ಬಾಯಿ ಬಿಡದ ಘಟನೆ ನಡೆದಿದೆ. ಆರು ತಿಂಗಳ ಹಿಂದೆ ನುಂಗುವಾಗ ಮತ್ತು ಮೂತ್ರ ವಿಸರ್ಜನೆ ವೇಳೆ ನೋವು ಕಾಣಿಸಿಕೊಂಡರೂ ತಾಯಿ ಬೈಯುತ್ತಾರೆ ಎಂಬ ಭಯದಿಂದ ಪುಟ್ಟ ಪೋರ ಕೇಶವ ಸಆಹು ಬಾಯಿ ಬಿಟ್ಟಿಲ್ಲ.
ನೋವು ತೀವ್ರವಾದಾಗ ಪೋಷಕರು ರಾಯಪುರ ವೈದ್ಯಕೀಯ ಕಾಲೇಜಿನ ವೈದ್ಯರ ಸಲಹೆ ಪಡೆದಿದ್ದಾರೆ. ಬಾಲಕನ ಮೂತ್ರನಾಳದಲ್ಲಿ ಐದು ಸೆಂಟಿಮೀಟರ್ ಗಾತ್ರದ ಕಲ್ಲು ಹಾಗೂ ಬಾಹ್ಯವಸ್ತುವೊಂದು ಇರುವುದನ್ನು ವೈದ್ಯರು ಪತ್ತೆ ಮಾಡಿದರು. "ಎಕ್ಸ್‌ರೇ ಹಾಗೂ ಅಲ್ಟ್ರಾಸೌಂಡ್ ತಪಾಸಣೆ ಮಾಡಿದಾಗಲೂ ಬಾಹ್ಯವಸ್ತು ಯಾವುದು ಎನ್ನುವುದು ಸ್ಪಷ್ಟವಾಗಿ ಗೋಚರವಾಗಲಿಲ್ಲ. ಮೂತ್ರನಾಳದಿಂದ ಕಲ್ಲನ್ನು ಹೊರತೆಗೆಯುವ ವೇಳೆ ರಕ್ತಸಿಕ್ತವಾಗಿದ್ದ 15 ಸೆಂಟಿಮೀಟರ್‌ನ ಕೋಲು ಹೊರಬಂತು, ಬಳಿಕ ಅದು ಟೂತ್‌ಬ್ರಶ್ ಎನ್ನುವುದು ಗೊತ್ತಾಯಿತು" ಎಂದು ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯ ಜೆ.ಪಟೇಲ್ ವಿವರಿಸಿದರು.
ವೈದ್ಯರು ಬಾಲಕನನ್ನು ಈ ಬಗ್ಗೆ ಪ್ರಶ್ನಿಸಿದಾಗ, ಯಾವಾಗ ಅದು ಹೊಟ್ಟೆಯೊಳಕ್ಕೆ ಹೋಯಿತು ಎಂದು ನೆನಪಿಲ್ಲ ಎಂದು ಉತ್ತರಿಸಿದ್ದಾನೆ. ಡಾ.ಪಟೇಲ್ ಹೇಳುವಂತೆ "ಇದು ತೀರಾ ಅಪರೂಪದ ಪ್ರಕರಣ. ನಾಣ್ಯ ನುಂಗಿದ ಮಕ್ಕಳು ನಮ್ಮಲ್ಲಿ ಚಿಕಿತ್ಸೆಗೆ ಸಾಮಾನ್ಯವಾಗಿ ಬರುತ್ತಾರೆ. ಈ ಬಾಲಕ ನುಂಗಿದ ಟೂತ್‌ಬ್ರಶ್ ಕರುಳಿಗೆ ಚುಚ್ಚಿ ಮೂರು ರಂದ್ರ ಮಾಡಿ ಕೊನೆಗೆ ಮೂತ್ರನಾಳಕ್ಕೆ ಸೇರಿಕೊಂಡಿದೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಚಿಕಿತ್ಸೆ ನೀಡದಿದ್ದರೆ ಜನ ಸಾಯುತ್ತಾರೆ. ಈ ಬಾಲಕ ಬದುಕಿ ಉಳಿದದ್ದು ಪವಾಡ"
ಬಾಲಕ ಸುಮಾರು ಒಂದು ವರ್ಷದ ಹಿಂದೆ ಇದನ್ನು ನುಂಗಿರಬೇಕು ಎಂದು ಶಸ್ತ್ರಚಿಕಿತ್ಸಕ ಡಾ.ಅಮೀನ್ ಮೆಮನ್ ಹೇಳಿದರು. ಗಾಯವಾದ ಮೂತ್ರನಾಳ ಹಾಗೂ ಕರುಳಿಗೆ ಶಸ್ತ್ರಚಿಕಿತ್ಸೆ ಮಾಡಿ ದೋಷ ಸರಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News