×
Ad

ಈ ಸಾರಿಗೆ ಇಲಾಖೆ ಅಧಿಕಾರಿಯ ಆಸ್ತಿ ಮೌಲ್ಯ 800 ಕೋಟಿ!

Update: 2016-05-01 21:05 IST

ಕಾಕಿನಾಡ: ನೀವು ಸಾರಿಗೆ ಉದ್ಯಮದಲ್ಲಿದ್ದು, ಆಂದ್ರಪ್ರದೇಶದ ಗೋವಾದವರಿ ಜಿಲ್ಲೆಯಲ್ಲಿ ಪರವಾನಗಿ ಪಡೆಯಬೇಕಾದರೆ, ಕಾಕಿನಾಡ ಸಾರಿಗೆ ಆಯುಕ್ತ ಆದಿಮೂಲಂ ಮೋಹನ್ ಅವರ ಕೈ ಬಿಸಿ ಮಾಡಲೇಬೇಕು.
ಹಲವು ಮಂದಿ ಶಾಸಕರು, ಸರ್ಕಾರ ಕಳೆದ ಹದಿನೈದು ವರ್ಷಗಳಲ್ಲಿ ಬದಲಾದರೂ ಈ ಪರಿಪಾಠ ನಡೆದುಕೊಂಡೇ ಬಂದಿದೆ. ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳ ಹೊಣೆ ಹೊಂದಿರುವ ಮೋಹನ್, ಈ ಅವಧಿಯಲ್ಲಿ 150 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ಮೌಲ್ಯ 800 ಕೋಟಿ ರೂಪಾಯಿ ಎನ್ನಲಾಗಿದೆ.
ಆದರೆ ಮೊನ್ನೆ ಶುಕ್ರವಾರ ಅದೃಷ್ಟ ಅವರಿಗೆ ಕೈಕೊಟ್ಟಿತು. ಭ್ರಷ್ಟಾಚಾರ ನಿಗ್ರಹ ಪಡೆ ಅವರ ವಿರುದ್ಧ ಪ್ರಕರಣ ದಾಖಲಿಸಿ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿದ್ದ ವಿವಿಧ ಆಸ್ತಿಗಳ ಮೇಲೆ ದಾಳಿ ನಡೆಸಿತು. ಆದಾಯ ಮೂಲಕ್ಕಿಂತ ಅಧಿಕ ಸಂಪತ್ತನ್ನು ಪತ್ತೆ ಮಾಡಿದೆ. ಖರೀದಿ ವೇಳೆ ಈ ಆಸ್ತಿಗಳ ಮೌಲ್ಯ 2.3 ಕೋಟಿ ಎಂದು ಅಂದಾಜು ಮಾಡಿದೆ.
ಹೈದರಾಬಾದ್ ಜ್ಯೂಬಿಲಿ ಹಿಲ್‌ನಲ್ಲಿ ದೊಡ್ಡ ಬಂಗಲೆ, ಕೊಂಪಲ್ಲಿ ಹಾಗೂ ಮಾದಾಪುರದಲ್ಲಿ 2100 ಯಾರ್ಡ್‌ನ ನಿವೇಶನ ಶೆರಿಲಿಂಗಪಲ್ಲಿಯಲ್ಲಿ ಮತ್ತೊಂದು ನಿವೇಶನ, ಪಂಜಗುತ್ತ ಪ್ರದೇಶದಲ್ಲಿ ಐಷಾರಾಮಿ ಫ್ಲಾಟ್, ತಿರುಪತಿಯಲ್ಲಿ 750 ಚದರ ಯಾರ್ಡ್‌ನ ನಿವೇಶನ, ನೆಲ್ಲೂರು ಜಿಲ್ಲೆಯಲ್ಲಿ 55 ಎಕರೆ ಜಮೀನು, ಕರ್ನಾಟಕದ ಬಳ್ಳಾರಿಯಲ್ಲಿ ಆಸ್ತಿಗಳನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
ಬ್ಯಾಂಕ್ ಖಾತೆ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಹಲವು ಲಾಕರ್‌ಗಳನ್ನು ಪತ್ತೆ ಮಾಡಲಾಗಿದ್ದು, ಸೋಮವಾರ ತೆರೆಯಬೇಕಾಗಿದೆ. ಕಾಕಿನಾಡದಲ್ಲಿ ಒಂದು ಚಿನ್ನದ ಅಂಗಡಿಯನ್ನೂ ಹೊಂದಿದ್ದಾರೆ ಎನ್ನಲಾಗಿದೆ. 1988ರಲ್ಲಿ ನೀರಾವರಿ ಇಲಾಖೆಯ ಎಇಇ ಆಗಿ ಸರ್ಕಾರಿ ಸೇವೆಗೆ ಸೇರಿದ್ದ ಈತ, ಬಳಿಕ ಗ್ರೂಪ್-1 ಪರೀಕ್ಷೆ ಉತ್ತೀರ್ಣನಾಗಿ ಬಡ್ತಿ ಪಡೆದಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News