ಮತಾಂತರ ಮಾಡಿದ ಕ್ರೈಸ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ
ಭೋಪಾಲ್, ಮೇ 1: ಸತ್ನಾದ ಚರ್ಚ್ ಒಂದರಲ್ಲಿ ಎಪ್ರಿಲ್ 27ರಂದು ಮದುವೆಯೊಂದು ನಡೆಯುತ್ತಿದ್ದಾಗ ಅಲ್ಲಿ ವಿವಾಹವಾಗುತ್ತಿರುವ ಜೋಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದೆಯೆಂದು ಆರೋಪಿಸಿ ಚರ್ಚ್‌ಗೆ ಬಜರಂಗದಳದವರು ದಾಳಿ ನಡೆಸಿ ಮದುವೆ ನಿಲ್ಲಿಸಿದ ಸಂದರ್ಭ ಅಲ್ಲಿ ಹಾಜರಿದ್ದ ಮಧ್ಯ ಪ್ರದೇಶ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸದಸ್ಯ ಲಕ್ಷ್ಮಿ ಯಾದವ್, "ಇತರ ಹಿಂದುಳಿದ ವರ್ಗದ ಜೋಡಿಯೊಂದನ್ನು ಮತಾಂತರಿಸಿ ಅವರಿಗೆ ವಿವಾಹ ಮಾಡಲು ಯತ್ನಿಸಿ ಕ್ರೈಸ್ತರು ಸಿಕ್ಕಿ ಬಿದ್ದ ಪ್ರಥಮ ಘಟನೆ ಇದಾಗಿದೆ,’’ ಎಂದು ಹೇಳಿದ್ದಾರೆ. ‘‘ ಆ ಯುವ ಜೋಡಿಯನ್ನು ನಾವು ಮರು ಮತಾಂತರಗೊಳಿಸುತ್ತೇವೆ, ಅವರ ಮೇಲೆ ಗಂಗಾಜಲ ಸಿಂಪಡಿಸಿ ಅವರಿಗೆ ಹಿಂದು ಪದ್ಧತಿಯಂತೆ ವಿವಾಹ ಮಾಡುತ್ತೇವೆ,’’ ಎಂದು ಹೇಳಿದ ಯಾದವ್ ಮತಾಂತರ ನಡೆಸಿದವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಬಹುದೇ ಎಂಬ ಬಗ್ಗೆ ತಾನು ಕಾನೂನು ಸಲಹೆ ಕೇಳುವುದಾಗಿ ತಿಳಿಸಿದ್ದಾರೆ.
ಈ ಘಟನೆ ನಡೆದು ಎರಡು ದಿನಗಳ ನಂತರ ಬಜರಂಗದಳ ನಡೆಸಿದ ಪ್ರತಿಭಟನೆಯ ಸಂದರ್ಭ ಸತ್ನಾದ ಕ್ಯಾಥೊಲಿಕ್ ಶಾಲೆಯೊಂದರ ಎದುರು ಪೋಪರ ಪ್ರತಿಕೃತಿಯನ್ನು ದಹಿಸಲಾಗಿತ್ತು.
ವಿವಾಹವಾಗಬೇಕಿದ್ದ ಜೋಡಿ ಅರುಣ್ (24) ಹಾಗೂ ಸುಭದ್ರ ತಾವೇನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲವೆಂದು ವಾದಿಸುತ್ತಾರೆ. ‘‘ನಮ್ಮಅನಾರೋಗ್ಯ ಪೀಡಿತ ಹೆತ್ತವರು ಹಲವರು ವೈದ್ಯರನ್ನು ಸಂದರ್ಶಿಸಿ ಚಿಕಿತ್ಸೆ ಪಡೆದರೂ ಗುಣವಾಗದಿದ್ದಾಗ ಆರನೆಯವರು (ಕ್ರಿಸ್ತ) ಅವರನ್ನು ಗುಣಪಡಿಸಿದ ನಂತರ ನಾವು ಮನ ಪರಿವರ್ತನೆಗೊಂಡಿದ್ದೇವೆ,’’ ಎಂದವರು ಹೇಳುತ್ತಾರೆ.
ಮತಾಂತರಗೊಳ್ಳದೇ ಇದ್ದಲ್ಲಿ ಅವರೇಕೆ ಚರ್ಚಿನಲ್ಲಿ ವಿವಾಹ ಕಾರ್ಯಕ್ರಮ ಏರ್ಪಡಿಸಬೇಕಿತ್ತು ಎಂಬುದು ಬಜರಂಗದಳದ ಪ್ರಶ್ನೆಯಾಗಿದೆ. ಚರ್ಚಿನ ಪ್ಯಾಸ್ಟರ್ ಸ್ಯಾಮ್ ಸಾಮ್ಯುಯೆಲ್ ಪ್ರಕಾರ ಚರ್ಚ್ 1998ರಲ್ಲಿ ಸ್ಥಾಪನೆಯಾದಂದಿನಿಂದ ಇದು ಅಲ್ಲಿ ನಡೆಯುತ್ತಿರುವ ಪ್ರಥಮ ವಿವಾಹವಾಗಿತ್ತು.
ಆದರೆ ಪೊಲೀಸರು ಸುಭದ್ರಾಳ 8ನೇ ತರಗತಿಯ ಮಾರ್ಕ್ ಶೀಟನ್ನು ಪರಿಶೀಲಿಸಿ ಆಕೆಗೆ 18 ತುಂಬಲು ಇನ್ನೂ 10 ದಿನವಿದೆ ಎಂದು ಹೇಳಿ ಅರುಣ್, ಆರು ಮಂದಿ ಪ್ಯಾಸ್ಟರುಗಳ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಯ ನಂತರವೂ ಅರುಣ್ ಹಾಗೂ ಸುಭದ್ರಾ ವಿವಾಹವಾಗುವ ದೃಢ ಸಂಕಲ್ಪ ಮಾಡಿದ್ದಾರೆ.