ಗೋಸುಂಬೆಗಿಂತ ತ್ವರಿತವಾಗಿ ಬಣ್ಣ ಬದಲಿಸುತ್ತಿರುವ ಮೋದಿ ಸರಕಾರ: ಶಿವಸೇನೆಯ ಟೀಕಾ ಪ್ರಹಾರ
ಮುಂಬೈ,ಮೇ 4: ಕಾಶ್ಮೀರಿ ನಾಯಕರು ಯಾವುದೇ ದೇಶದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ನಿರ್ಬಂಧವಿಲ್ಲ ಎಂದು ಹೇಳಿರುವುದಕ್ಕಾಗಿ ಮೋದಿ ಸರಕಾರದ ವಿರುದ್ಧ ತೀವ್ರ ಟೀಕಾಪ್ರಹಾರವನ್ನು ನಡೆಸಿರುವ ಮಿತ್ರಪಕ್ಷ ಶಿವಸೇನೆಯು, ಬಿಜೆಪಿ ಸರಕಾರವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಪ್ರತ್ಯೇಕತಾವಾದಿಗಳಿಗೆ ‘ವಿನಾಯಿತಿ’ ನೀಡಿದೆ ಮತ್ತು ಗೋಸುಂಬೆಗಿಂತ ತ್ವರಿತವಾಗಿ ಬಣ್ಣವನ್ನು ಬದಲಿಸುತ್ತಿದೆ ಎಂದು ಹೇಳಿದೆ.
ಹುರಿಯತ್ ಕುರಿತಂತೆ ಕೇಂದ್ರವು ತನ್ನ ನಿಲುವಿನಿಂದ ಸಂಪೂರ್ಣವಾಗಿ ವಿಮುಖವಾಗಿರುವುದು ಅಯೋಧ್ಯೆಯ ರಾಮಮಂದಿರವನ್ನು ಬಾಬ್ರಿ ಮಸೀದಿಯೆಂದು ಕರೆದಂತೆ ಎಂದು ಅದು ಹೇಳಿದೆ.
ಹುರಿಯತ್ ಕಾನ್ಫರೆನ್ಸ್ ಈಗ ಕಾಶ್ಮೀರ ಕುರಿತಂತೆ ಪಾಕಿಸ್ತಾನದೊಂದಿಗೆ ಚರ್ಚಿಸಲಿದೆ ಮತ್ತು ಕೇಂದ್ರ ಸರಕಾರವು ಅವರಿಗೆ ಈ ವಿನಾಯಿತಿಯನ್ನು ನೀಡಿದೆ. ನಾಳೆ ಕಾಶ್ಮೀರ ಕುರಿತಂತೆ ಮಸೂದ ಅಝರ್,ದಾವೂದ್ ಇಬ್ರಾಹೀಂ ಮತ್ತು ಝಕಿಯುರ್ ರಹಮಾನ್ ಲಖ್ವಿ ಜೊತೆ ಮಾತುಕತೆ ನಡೆಯುತ್ತದೆ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮನಾ’ದ ಬುಧವಾರದ ಸಂಪಾದಕೀಯ ಲೇಖನದಲ್ಲಿ ಹೇಳಿದೆ.
ಅವರು ಗೋಸುಂಬೆಗಿಂತ ವೇಗವಾಗಿ ಬಣ್ಣ ಬದಲಿಸುತ್ತಿದ್ದರೆ ಇತ್ತ ಜನರು ಅವರು(ಮೋದಿ ಸರಕಾರ) ಇದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಅಚ್ಚರಿ ಪಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇನಾದರೂ ಹುರಿಯತ್ ಮತ್ತು ಕಾಶ್ಮೀರ ಬಿಕ್ಕಟ್ಟು ಕುರಿತಂತೆ ಹೀಗೆ ತಿಪ್ಪರಲಾಗ ಹೊಡೆದಿದ್ದರೆ ಅದನ್ನು ಪಾಕಿಸ್ತಾನದ ಏಜಂಟ್ ಎಂದು ಇದೇ ಬಿಜೆಪಿ ಮತ್ತು ಸಂಘ ಪರಿವಾರ ಬಣ್ಣಿಸುತ್ತಿದ್ದವು ಎಂದಿರುವ ಸಂಪಾದಕೀಯವು, ಆಗ ಕಾಂಗ್ರೆಸ್ ದೇಶವನ್ನು ಮಾರಾಟ ಮಾಡುತ್ತಿದೆ ಎಂದು ಅವು ಆರೋಪಿಸುತ್ತಿದ್ದವು ಮತ್ತು ಕಾಂಗ್ರೆಸ್ ಸರಕಾರದ ಪದಚ್ಯುತಿಗೆ ಆಗ್ರಹಿಸುತ್ತಿದ್ದವು ಎಂದಿದೆ.
ಕಾಶ್ಮೀರವೊಂದನ್ನು ಹೊರತು ಪಡಿಸಿ ಇತರೆಲ್ಲ ವಿಷಯಗಳನ್ನು ಪಾಕಿಸ್ತಾನದೊಂದಿಗೆ ಚರ್ಚಿಸುವುದಾಗಿ ಮೋದಿ ಸರಕಾರವು ನಿನ್ನೆಯವರೆಗೂ ಹೇಳುತ್ತಿತ್ತು. ಇದೀಗ ಅದು ತನ್ನ ನಿಲುವನ್ನು ಬದಲಿಸಿದೆ. ಹಿಂದಿನ ಕಾಂಗ್ರೆಸ್ ಸರಕಾರವು ಸಹ ತಳೆದಿರದಂಥ ದುರ್ಬಲ ನಿಲುವನ್ನು ತಳೆದಿದೆ ಎಂದು ಸೇನೆಯು ಟೀಕಿಸಿದೆ.
ವಾಸ್ತವದಲ್ಲಿ ಈ ನಿಲುವು ಬದಲಾವಣೆಯಿಂದ ದೇಶವು ಅಚ್ಚರಿ ಪಡಬೇಕಾಗಿಲ್ಲ. ಅಧಿಕಾರಕ್ಕಾಗಿ ಬಿಜೆಪಿಯು ಪಾಕಿಸ್ತಾನದ ಬಗ್ಗೆ ಸಹಾನುಭೂತಿ ಹೊಂದಿರುವ ಮತ್ತು ಭಯೋತ್ಪಾದಕರನ್ನು ಬೆಳೆಸಿರುವ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗಲೇ ಜನರು ಇದನ್ನು ಗಮನಿಸಿದ್ದರು ಎಂದು ಅದು ಹೇಳಿದೆ.