ಶಸ್ತ್ರ ಚಿಕಿತ್ಸೆಯಿಂದ ದಿಲ್ಲಿ ಸಾರಿಗೆ ಸಚಿವರಿಗೆ ಗುಂಡಿನಿಂದ ಮುಕ್ತಿ
Update: 2016-05-06 20:48 IST
ಹೊಸದಿಲ್ಲಿ , ಮೇ 6: ಪ್ರಧಾನಿ ನರೇಂದ್ರ ಮೋದಿ ಅವರ ಗಂಟಲ ಮುಳ್ಳಾಗಿರುವ ಆಮ್ ಆದ್ಮಿ ಪಕ್ಷದ ದೆಹಲಿ ಸರಕಾರದ ಸಾರಿಗೆ ಸಚಿವರ ಕುತ್ತಿಗೆಯಲ್ಲಿ ಕಳೆದ 17 ವರ್ಷಗಳಿಂದ ಗುಂಡೊಂದು ಸಿಕ್ಕಿಕೊಂಡಿತ್ತು. ಶುಕ್ರವಾರ ಬೆಳಗ್ಗೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ನಡೆಸಿದ ಶಸ್ತ್ರ ಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆಯಲಾಗಿದೆ. ಸಚಿವ ಗೋಪಾಲ್ ರಾಯ್ ಅವರನ್ನು ಗುರುವಾರ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
1999 ರಲ್ಲಿ ಲಕ್ನೋ ವಿವಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯೊಂದರ ಸಂದರ್ಭದಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದರಿಂದ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಪೂರ್ಣ ಪಾರ್ಶ್ವವಾಯುಗೆ ಒಳಗಾಗಿದ್ದರು. ಆಗ ಶಸ್ತ್ರಚಿಕಿತ್ಸೆ ನಡೆಸಿದರೆ ಅವರ ಪ್ರಾಣಕ್ಕೇ ಅಪಾಯ ಇದ್ದುದರಿಂದ ಅದನ್ನು ತೆಗೆದಿರಲಿಲ್ಲ. ಮೂರು ವರ್ಷಗಳ ಬಳಿಕ ಅವರು ಚೇತರಿಸಿಕೊಂಡು ನಡೆಯಲು ಶಕ್ತವಾಗಿದ್ದರು. ಅವರ ಮುಂದಿನ ಚಿಕಿತ್ಸೆ ಚೆನ್ನೈ ಹಾಗು ಹೈದರಾಬಾದ್ ಗಳ ಅಪೋಲೋ ಆಸ್ಪತ್ರೆಗಳಲ್ಲಿ ನಡೆಯಲಿದೆ.