24 .. ಕಾಲಕ್ಕೆ ಸವಾಲ್...

Update: 2016-05-07 17:14 GMT

ಸೃಜನಶೀಲ ನಿರ್ದೇಶಕ ವಿಕ್ರಮ್ ಕುಮಾರ್ ಹಾಗೂ ಪ್ರತಿಭಾವಂತ ನಟ ಸೂರ್ಯ, ಜೊತೆಗೂಡಿದಲ್ಲಿ ಒಂದು ಅದ್ಭುತ ಚಿತ್ರ ಸೃಷ್ಟಿ ಖಂಡಿತವೆಂಬ ಪ್ರೇಕ್ಷಕರ ನಿರೀಕ್ಷೆಯನ್ನು, ತಮಿಳು ಚಿತ್ರ 24 ಬಹಳಷ್ಟು ಮಟ್ಟಿಗೆ ಹುಸಿಗೊಳಿಸಿಲ್ಲ. ಕಮರ್ಶಿಯಲ್ ಚಿತ್ರದ ಇತಿಮಿತಿಯಲ್ಲೇ ಒಂದು ಪ್ರಬುದ್ಧವಾದ ವೈಜ್ಞಾನಿಕ ಕಥೆಯನ್ನು ನಿರ್ದೇಶಕರು ಬೆಳ್ಳಿತೆರೆಯಲ್ಲಿ ಅಚ್ಚುಕಟ್ಟಾಗಿ ಅನಾವರಣಗೊಳಿಸಿದ್ದಾರೆ. ಆ ಮೂಲಕ ಪ್ರೇಕ್ಷಕರಿಗೆ ಒಂದು ಅಹ್ಲಾದಕರ ಪ್ರಯಾಣದ ಅನುಭವವನ್ನು ತಂದುಕೊಟ್ಟಿದ್ದಾರೆ. ಖಂಡಿತವಾಗಿಯೂ 24, ಭಾರತದಲ್ಲಿ ತಯಾರಾದ ಅತ್ಯುತ್ತಮ ವೈಜ್ಞಾನಿಕ ಕಥಾಚಿತ್ರಗಳಲ್ಲೊಂದೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕಮರ್ಶಿಯಲ್ ಚಿತ್ರಗಳಿಗೆ ಅನಿವಾರ್ಯವಾಗಿರುವಂತಹ ರೋಮ್ಯಾಂಟಿಕ್ ಸನ್ನಿವೇಶಗಳು ಇಲ್ಲೂ ಇವೆ, ಜೊತೆಗೆ ಅನಗತ್ಯವಾಗಿ ಹಾಡುಗಳನ್ನು ತುರುಕಿಸಲಾಗಿದೆ. ಆದಾಗ್ಯೂ, 24 ಭಾರತೀಯ ಚಿತ್ರರಂಗ ಜಾಗತಿಕ ಮಟ್ಟದದ ಸ್ಥಾನಮಾನವನ್ನು ಪಡೆಯುವಲ್ಲಿ ಇರಿಸಿದ ಒಂದು ಪುಟ್ಟ ಹೆಜ್ಜೆಯಾಗಿದೆಯೆಂಬುದನ್ನು ನಿರ್ವಿವಾದವಾಗಿ ಹೇಳಬಹುದು. ಸೇತುರಾಮನ್ (ಸೂರ್ಯ), ಓರ್ವ ಸಿರಿವಂತ ವಿಜ್ಞಾನಿ. ಪತ್ನಿ ಪ್ರಿಯಾ (ನಿತ್ಯಮೆನನ್) ಹಾಗೂ ಪುತ್ರನ ಜೊತೆ ಸಂತೃಪ್ತಿಯ ಜೀವನ ಆತನದು. ಕಾಲದ ಆಚೆಗೆ ಪ್ರಯಾಣಿಸಲು ಸಾಧ್ಯವಿರುವ ‘ಟೈಮ್ ಟ್ರಾವೆಲ್ ವಾಚ್’ ನ್ನು ಸೃಷ್ಟಿವುದೇ ಆತನ ಬದುಕಿನ ಗುರಿಯಾಗಿರುತ್ತದೆ. ಆದರೆ ಆತನ ಅವಳಿ ಸಹೋದರ ಅತ್ರೇಯ (ಇತನೂ ಸೂರ್ಯ), ಮಹಾ ಖತರ್‌ನಾಕ್ ಮನುಷ್ಯ. ಕಾಲವನ್ನು ನಿಯಂತ್ರಿಸುವ ಮೂಲಕ ಜಗತ್ತಿನ ಮೇಲೆ ಆಧಿಪತ್ಯ ಸಾಧಿಸುವ ದುರುದ್ದೇಶ ಆತನದು. ಇದಕ್ಕಾಗಿ ಆತ ವಾಚ್‌ನ ಮಾದರಿಯಲ್ಲಿರುವ ಈ ಟೈಮ್ ಮೆಶಿನ್‌ನನ್ನು ತನ್ನದಾಗಿಸಿಕೊಳ್ಳಲು ಹೊಂಚುಹಾಕುತ್ತಿರುತ್ತಾನೆ. ಆನಂತರ ನಡೆಯುವ ಸರಣಿ ಘಟನೆಗಳಲ್ಲಿ ಆತನ ಪ್ರಯತ್ನವನ್ನು ವಿಫಲಗೊಳಿಸುವ ಸೇತುರಾಮನ್, ತನ್ನ ಪತ್ನಿಯೊಂದಿಗೆ ಪ್ರಾಣಕಳೆದುಕೊಳ್ಳುತ್ತಾನೆ. ಆದಾಗ್ಯೂ ತನ್ನ ಪುತ್ರ ಮಣಿ ಹಾಗೂ ಸಂಶೋಧನೆಯಾದ ಟೈಮ್ ಮೆಶಿನನ್ನು ಉಳಿಸಿಕೊಳ್ಳುವಲ್ಲಿ ಆತ ಸಫಲನಾಗುತ್ತಾನೆ. ಅತ್ರೇಯ ಕೋಮಾವಸ್ಥೆಗೆ ಜಾರುತ್ತಾನೆ. ಮಣಿ ಸಾಕುತಾಯಿ ಸತ್ಯಾಭಾಮ (ಶರಣ್ಯ)ಳ ಆಸರೆಯಲ್ಲಿ ಬೆಳೆಯುತ್ತಾನೆ.

ಹೀಗೆ 26 ವರ್ಷಗಳು ಕಳೆಯುತ್ತದೆ. ಮಣಿ (ಸೂರ್ಯ) ವಾಚ್‌ಮೆಕ್ಯಾನಿಕ್ ಆಗಿ ದಿನಗಳೆಯುತ್ತಿರುತ್ತಾನೆ. ಆತನಿಗೆ ತನ್ನ ಪೂರ್ವ ವೃತ್ತಾಂತದ ಅರಿವಿರುವುದಿಲ್ಲ. ಆದರೆ ವಿಧಿಯ ಲೀಲೆಯೆಂಬಂತೆ ಆತನ ಕೈಗೆೆ ಆಕಸ್ಮಿಕವಾಗಿ ತನ್ನ ತಂದೆಯ ಟೈಮ್‌ಮೆಶಿನ್ ವಾಚ್ ಸಿಕ್ಕಿಬಿಡುತ್ತದೆ. ಆನಂತರದ ಸನ್ನಿವೇಶದಲ್ಲಿ ಮಣಿಗೆ ಈ ವಾಚ್‌ನ ಅಸಾಧಾರಣ ಸಾಮರ್ಥ್ಯದ ಅನುಭವವಾಗುತ್ತದೆ. ಆ ಯಂತ್ರವನ್ನು ಬಳಸಿಕೊಂಡು ತನ್ನ ಅಂಗಡಿಗೆ ವಾಚ್ ರಿಪೇರಿಗೆಂದು ಬಂದ ಯುವತಿ ಸತ್ಯಾ (ಸಮಂತಾ)ಳನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಏತನ್ಮಧ್ಯೆ, ಅತ್ರೇಯ ಕೋಮಾವಸ್ಥೆಯಿಂದ ಎದ್ದೇಳುತ್ತಾನೆ. ತನಗೀಗ ಮುಪ್ಪಡರಿರುವುದು ಆತನಿಗೆ ಅಘಾತವುಂಟು ಮಾಡುತ್ತದೆ. ಇದಕ್ಕಾಗಿ ಆತ ತನ್ನ ಕಳೆದ ಯೌವನವನ್ನು ಮರಳಿ ಸಂಪಾದಿಸಿಕೊಳ್ಳಲು ಸಮಯದ ಹಿಂದಕ್ಕೆ ಪ್ರಯಾಣಿಸಲು ಬಯಸುತ್ತಾನೆ. ಇದಕ್ಕಾಗಿ ಆತ ಆ ಟೈಮ್‌ಮೆಶಿನ್‌ನ ಸ್ವಾಧೀನಕ್ಕೆ ಮುಂದಾಗುತ್ತಾನೆ. ಅತ್ರೇಯನಿಗೆ ಕಾಲದ ಹಿಂದಕ್ಕೆ ಪ್ರಯಾಣಿಸಲು ಸಾಧ್ಯವಾಗುವುದೇ?. ತನ್ನ ನತದೃಷ್ಟ ತಂದೆ ಹಾಗೂ ತಾಯಿಗೆ ಸಂಭವಿಸಿದ ದುರಂತ ಘಟನೆಗಳನ್ನು ಮಣಿ, ಟೈಮ್‌ಮೆಶಿನ್ ಮೂಲಕ ಸರಿಪಡಿಸಲು ಸಫಲನಾಗುತ್ತಾನೆಯೇ?. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾ ಚಿತ್ರ ಮುಂದೆ ಸಾಗುತ್ತದೆ.

ವಿಕ್ರಮ್ ಕುಮಾರ್ ಅವರ ಲವಲವಿಕೆಯ ಚಿತ್ರಕತೆಯೇ 24 ಚಿತ್ರದ ಅತಿ ದೊಡ್ಡ ಶಕ್ತಿಯಾಗಿದೆ. ಕಾಲದಿಂದಾಚೆಗಿನ ಪ್ರಯಾಣದ ಕುರಿತ ವೈಜ್ಞಾನಿಕ ಪರಿಕಲ್ಪನೆಯನ್ನು ನಿರ್ದೇಶಕರು ಆರು ವರ್ಷದ ಮಗುವೂ ಸುಲಭವಾಗಿ ಅರಿತುಕೊಳ್ಳಲು ಸಾಧ್ಯವಾಗುವಂತಹ ರೀತಿಯಲ್ಲಿ ನಿರೂಪಿಸಿದ್ದಾರೆ.

ಇದೇ ವೇಳೆ, ಪ್ರೇಕ್ಷಕರ ಬುದ್ಧಿಮತ್ತೆಯನ್ನು ಪರೀಕ್ಷಿಸುವಂತಹ ಒಂದೆರಡು ರೋಚಕ ಸನ್ನಿವೇಶಗಳೂ ಚಿತ್ರದಲ್ಲಿವೆ. ಅದರಲ್ಲೂ ಚಿತ್ರದ ಕ್ಲೈಮಾಕ್ಸ್ ದೃಶ್ಯದಲ್ಲಿ ನಿರ್ದೇಶಕರು ತೋರಿಸಿದ ಜಾಣ್ಮೆಯನ್ನು ಕಂಡು ಪ್ರೇಕ್ಷಕರು ಮೂಕವಿಸ್ಮಿತರಾಗುವುದು ಖಂಡಿತ. ಮೊದಲಾರ್ಧದಲ್ಲಿ ಬರುವ ರೋಮ್ಯಾಂಟಿಕ್ ದೃಶ್ಯಗಳು ಹಾಗೂ ಹಾಡುಗಳು, ಚಿತ್ರದ ಓಟಕ್ಕೆ ತಡೆಯೊಡ್ಡಿವೆ. ಹಾಗೆಯೇ ಕಾಮಿಡಿ ಸನ್ನಿವೇಶಗಳೂ ಕೂಡಾ ಬೇಕೆಂದೇ ತುರುಕಿಸಿರುವಂತೆ ಭಾಸವಾಗುತ್ತದೆ. ಮೊದಲಾರ್ಧವನ್ನು ಒಂದಿಷ್ಟು ಟ್ರಿಮ್‌ಗೊಳಿಸಿರುತ್ತಿದ್ದರೆ, ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಲು ಸಾಧ್ಯವಿತ್ತು.

    ಅದೇನಿದ್ದರೂ 24ನಲ್ಲಿ ಆದಿಯಿಂದ ಅಂತ್ಯದವರೆಗೂ ಸೂರ್ಯ ಸಂಪೂರ್ಣವಾಗಿ ಪ್ರಕಾಶಿಸಿದ್ದಾರೆ. ಅಮಾಯಕ ವಿಜ್ಞಾನಿ ಸೇತುರಾಮನ್ ಪಾತ್ರದಲ್ಲಾಗಲಿ, ವಿಲನ್ ಅತ್ರೇಯ ಹಾಗೂ ಹುಡುಗಾಟದ ಯುವಕ ಮಣಿ ಈ ಮೂರು ಪಾತ್ರಗಳಲ್ಲಿಯೂ ಸೂರ್ಯ ಪರಕಾಯ ಪ್ರವೇಶ ಮಾಡಿದ್ದಾರೆ. ತನ್ನ ಬಾಡಿಲಾಂಗ್ವೆಜ್ ಹಾಗೂ ಅಭಿನಯ ಶೈಲಿಯಲ್ಲಿ ವೈವಿಧ್ಯತೆಯನ್ನು ಪ್ರದರ್ಶಿಸಿದ್ದಾರೆ. ಆದಾಗ್ಯೂ ಈ ಮೂರು ಪಾತ್ರಗಳ ಪೈಕಿ ಅತ್ರೇಯನಾಗಿ ಸೂರ್ಯ ಸಖತ್ತಾಗಿ ಮಿಂಚಿದ್ದಾರೆ. 
ದ್ವಿತೀಯಾರ್ಧದಲ್ಲಿ ಮಣಿ ಪಾತ್ರದಲ್ಲಿ ಪ್ರೇಕ್ಷಕರ ಮನಗೆಲ್ಲುತ್ತಾರೆ. ನಾಯಕಿಯರಾದ ಸಮಂತಾ ಹಾಗೂ ನಿತ್ಯಾಮೆನನ್‌ಗೆ ತಮ್ಮ ಅಭಿನಯ ಪ್ರತಿಭೆ ಪ್ರದರ್ಶಿಸಲು ಹೆಚ್ಚು ಅವಕಾಶ ದೊರೆತಿಲ್ಲ. ತಾಯಿ ಪಾತ್ರಕ್ಕೆ ತಾನು ಹೇಳಿ ಮಾಡಿಸಿದ ನಟಿ ಎಂಬುದನ್ನು ಶರಣ್ಯ ಮೋಹನ್ ಮತ್ತೊಮ್ಮೆ ನಿರೂಪಿಸಿದ್ದಾರೆ. ಮಣಿ ಅವರ ಛಾಯಾಗ್ರಹಣ ಚಿತ್ರದ ಇನ್ನೊಂದು ಪ್ರಮುಖ ಹೈಲೈಟ್. ಹಾಲಿವುಡ್ ಚಿತ್ರಗಳಿಗೆ ಸರಿಸಾಟಿಯಾಗಿ ಕೆಲವು ಆ್ಯಕ್ಷನ್ ದೃಶ್ಯಗಳನ್ನು ಅವರು ತೆರೆಯಲ್ಲಿ ಮೂಡಿಸಿದ್ದಾರೆ. ಸಂಕಲನಕಾರ ಪ್ರವೀಣ್ ಪೂಡಿ, ಕೆಲವು ಅನಗತ್ಯ ಸನ್ನಿವೇಶಗಳಿಗೆ ಕತ್ತರಿಹಾಕಿದರೆ ಚೆನ್ನಾಗಿತ್ತು ಎಂಬ ಭಾವನೆ ಅಲ್ಲಲ್ಲಿ ಮೂಡುತ್ತದೆ. ರೆಹಮಾನ್ ಅವರ ಹಾಡುಗಳು ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್. ಹಿನ್ನೆಲೆ ಸಂಗೀತ ಕೂಡಾ ಚಿತ್ರದ ಅಂದಕ್ಕೆ ಕುಂದಣವಿಟ್ಟಿದೆ. ಒಟ್ಟಾರೆಯಾಗಿ ಹೇಳುವುದಾದರೆ, 24 ಚಿತ್ರವು ಒಂದು ಸದಭಿರುಚಿಯ ಪ್ರಯತ್ನವಾಗಿದ್ದು, ಸೂರ್ಯ ಅವರ ಅದ್ಭುತ ಅಭಿನಯ ಹಾಗೂ ವಿಕ್ರಮ್ ಕುಮಾರ್‌ರ ಸಮರ್ಥ ನಿರ್ದೇಶನದೊಂದಿಗೆ ಪಕ್ವವಾಗಿರುವ 24ನ್ನು ಒಂದು ಸಲವಾದರೂ ನೋಡಲೇಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News