ಮೀರಠ್ ನ ಶಾಂತಿದೂತ ' ಮೌಲಾನ ಚತುರ್ವೇದಿ '

Update: 2016-05-08 10:44 GMT

ಮೀರಠ್ , ಮೇ 8 : ಉತ್ತರ ಪ್ರದೇಶದ ಕೋಮು ಸೂಕ್ಷ್ಮ ಪ್ರದೇಶವೆಂದೇ ಕುಖ್ಯಾತಿ ಗಳಿಸಿರುವ ಮೀರತ್ ನಲ್ಲಿ ' ಮೌಲಾನ ಚತುರ್ವೇದಿ ' ಅವರು ಶಾಂತಿದೂತ ಎಂದೇ ಖ್ಯಾತರಾಗಿದ್ದಾರೆ. ಜ್ಞಾನಾರ್ಜನೆಗೆ ಜಾತಿ, ಧರ್ಮದ ಹಂಗಿಲ್ಲ ಹಾಗು ಸಹಬಾಳ್ವೆಗೆ ಧರ್ಮ ಅಡೆತಡೆ ಅಲ್ಲ  ಎಂಬುದಕ್ಕೆ ಈ ಮೌಲಾನ ಚತುರ್ವೇದಿ ಅತ್ಯುತ್ತಮ ಉದಾಹರಣೆ . 

ಹಿರಿಯ ಮುಸ್ಲಿಂ ಧಾರ್ಮಿಕ ವಿದ್ವಾಂಸ  ಹಾಗು ಇಲ್ಲಿನ 130 ವರ್ಷಗಳ ಇತಿಹಾಸವಿರುವ ಮದ್ರಸಾ ಇಮ್ದಾದುಲ್ ಇಸ್ಲಾಂ ನ ಪ್ರಾಂಶುಪಾಲ ಮೌಲಾನ ಶಾಹೀನ್ ಜಮಾಲಿ ' ಚತುರ್ವೇದಿ' ಅವರು ಇಲ್ಲಿನ ಹಿಂದೂ ಬಹುಸಂಖ್ಯಾತ ಸದರ್ ಪ್ರದೇಶದಲ್ಲಿ ಬಡ ಕುಟುಂಬಗಳಿಂದ ಬಂದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಧಾರ್ಮಿಕ ವಿದ್ಯಾಭ್ಯಾಸ ನೀಡುತ್ತಿದ್ದಾರೆ.

ಬಿಹಾರದ ಚಂಪಾರಣ್  ಮೂಲದ ಮೌಲಾನ ದಾರುಲ್ ಉಲೂಂ ದೇವಬಂದ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರು. ಬಳಿಕ ಆಲಿಂ ಹಾಗು ಮುಫ್ತಿ ಪದವಿ ಪಡೆದರೂ ಅವರ ಜ್ಞಾನದಾಹ ತಣಿಯಲಿಲ್ಲ. 

"ನಾನು ಕುರ್ ಆನ್ ನ ಬಗ್ಗೆ ಪಿ ಎಚ್ ಡಿ ಮಾಡಿದೆ. ಬಳಿಕ ಅಲಿಗಡ್ಹ್ ಮುಸ್ಲಿಂ ವಿವಿಯಲ್ಲಿ ಸಂಸ್ಕೃತದಲ್ಲಿ ಎಂ ಎ ಮಾಡಿದೆ. ಅಲ್ಲಿ ಸಂಸ್ಕೃತದಲ್ಲಿ ಆಸಕ್ತಿ ಬೆಳೆದು ವೇದ, ಗೀತೆ ಹಾಗು ಇತರ ಧಾರ್ಮಿಕ ಗ್ರಂಥಗಳನ್ನು ' ಪಂಡಿತ್ ಬಶೀರುದ್ದೀನ್ ' ಅವರಲ್ಲಿ  ಅಧ್ಯಯನ ಮಾಡಿದೆ " ಎಂದು ಮೌಲಾನ ಚತುರ್ವೇದಿ ಹೇಳುತ್ತಾರೆ. ' ಪಂಡಿತ್ ಬಶೀರುದ್ದೀನ್ ' ಅವರ ಹೆಸರೂ ಆಸಕ್ತಿಕರವಾಗಿದೆ. ತಮ್ಮ ಗುರು ಬಶೀರುದ್ದೀನ್ ಅವರು ಸಂಸ್ಕೃತ ಹಾಗು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಹೊಂದಿದ್ದ ಪಾಂಡಿತ್ಯವನ್ನು ಗೌರವಿಸಿ ಮಾಜಿ ಪ್ರಧಾನಿ ಪಂಡಿತ್ ನೆಹರೂ ಅವರು ಬಶೀರುದ್ದೀನ್ ಅವರಿಗೆ ' ಪಂಡಿತ್ ' ಪದವಿ ನೀಡಿ ಗೌರವಿಸಿದ್ದರು. 

ತಮ್ಮ ಗುರುಗಳೊಂದಿಗೆ ಆ ದಿನಗಳಲ್ಲಿ ಮೌಲಾನ ಅವರು ಹಲವಾರು ಧಾರ್ಮಿಕ ಸಮಾವೇಶಗಳಿಗೆ ಹೋಗುತ್ತಿದ್ದರು. ಕರ್ನಾಟಕದಲ್ಲಿ ನಡೆದ ಅಂತಹದೊಂದು ಕಾರ್ಯಕ್ರಮದಲ್ಲಿ ಯುವ ಮೌಲಾನ ಶಾಹೀನ್ ಅವರು ಸಂಸ್ಕೃತ ಹಾಗು ವೇದಗಳಲ್ಲಿ ಸಂಪಾದಿಸಿರುವ ಅಪಾರ ಜ್ಞಾನದ ಪರಿಚಯವಾದ ವಿದ್ವಾಂಸರು ಅವರಿಗೆ 'ಚತುರ್ವೇದಿ' ( ಎಲ್ಲ ನಾಲ್ಕು ವೇದಗಳಲ್ಲಿ ಪಾಂಡಿತ್ಯ ಹೊಂದಿರುವವರು ) ಎಂಬ ಬಿರುದು ನೀಡಿ ಗೌರವಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News