ಜಿಶಾ ಕೊಲೆ ಪ್ರಕರಣ: ಹೆಚ್ಚು ಪ್ರಚಾರ ನೀಡದಂತೆ ಪೊಲೀಸರಿಗೆ ಒತ್ತಡ
ಕೊಚ್ಚಿ, ಮೇ 9: ಜಿಶಾ ಕೊಲೆ ಪ್ರಕರಣದಲ್ಲಿ ಆರಂಭಿಕ ದಿವಸಗಳಲ್ಲಿ ಪೊಲೀಸರನ್ನು ನಿಯಂತ್ರಿಸಲು ಶ್ರಮಿಸಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಚುನಾವಣಾ ಕಾಲವಾದ್ದರಿಂದ ಘಟನೆಯು ರಾಜಕೀಯವಾಗಿ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಘಟನೆಗೆ ಹೆಚ್ಚಿನ ಪ್ರಚಾರ ನೀಡಬಾರದೆಂದು ಉನ್ನತ ಮಟ್ಟದ ಸೂಚನೆ ಪೊಲೀಸರಿಗೆ ಸಿಕ್ಕಿತ್ತೆಂದು ವರದಿಯಾಗಿದೆ.
ಕಳೆದ ತಿಂಗಳು 28ರಂದು ರಾತ್ರೆಯಲ್ಲಿ ಜಿಶಾ ಹತ್ಯೆಯಾಗಿತ್ತು. ಹುಡುಗಿಯೊಬ್ಬಳನ್ನು ತಲೆಗೆ ಹೊಡೆದು ಕೊಲೆ ನಡೆಸಲಾಗಿದೆ ಎಂದು ಪೊಲೀಸರು ಮೊದಲ ದಿವಸ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಮುಂದಿನ ಎರಡು ದಿವಸಗಳಲ್ಲಿ ಮಾಧ್ಯಮಗಳಿಗೆ ಹೆಚ್ಚು ಮಾಹಿತಿ ಒದಗಿಸದಿರುವಲ್ಲಿ ಪೊಲೀಸರು ಯಶಸ್ವಿಯೂ ಆಗಿದ್ದರು. ನೆರೆಯವರು ಪ್ರಕರಣದಲ್ಲಿ ಹೆಚ್ಚು ಉತ್ಸಾಹ ತೋರಿಸದ್ದಿದ್ದುದು ಪೊಲೀಸರಿಗೆ ಉಪಕಾರವೂ ಆಗಿತ್ತು.
ಮಾಧ್ಯಮಗಳೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವುದರಲ್ಲಿ ವಿಫಲವಾಗಿದ್ದವು. ಮೇ ಒಂದಕ್ಕೆ ಜಿಶಾರ ಸಹಪಾಠಿಗಳಾದ ಎರ್ನಾಕುಲಂ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಶಾರ ಮನೆಗೆ ಭೇಟಿ ನೀಡಿದರು. ಆಗಲೇ ಘಟನೆಯ ಗಂಭೀರತೆಯನ್ನು ಹೊರ ಜಗತ್ತು ಗಮನಿಸಲು ಸಾಧ್ಯವಾಗಿದ್ದು. ಅವರುಫೇಸ್‌ಬುಕ್‌ನಲ್ಲಿ ವಸ್ತುಸ್ಥಿತಿಯನ್ನು ಬಹಿರಂಗೊಳಿಸಿದರು. ಇದನ್ನು ನೋಡಿದ ದೃಶ್ಯಮಾಧ್ಯಮಗಳು ಅಂದೇ ಸಂಜೆ ಸುದ್ದಿ ಬಿತ್ತರಿಸಿದವು. ಮರುದಿವಸ ಉಳಿದ ಮಾಧ್ಯಮಗಳು ವಿಷಯವನ್ನು ವಹಿಸಿಕೊಂಡು ವರದಿ ಪ್ರಕಟಿಸಿತ್ತು.
ಪೊಲೀಸ್ ಕೈಗೊಳ್ಳಬೇಕಾದ ಕ್ರಮಗಳನ್ನು ಸರಿಯಾಗಿ ನಿಭಾಯಿಸಿಲ್ಲ. ಲೈಂಗಿಕ ಕಿರುಕುಳ ನಡೆದದ್ದು ಮೊದಲ ಆರೋಪ ಪಟ್ಟಿಯಲ್ಲಿರಲಿಲ್ಲ. ಘಟನೆ ಸ್ಥಳವನ್ನು ಸೀಲ್ ಮಾಡಬೇಕಿತ್ತು. ಆದರೆ ಪೊಲೀಸರು ಅದನ್ನೂ ಮಾಡಲಿಲ್ಲ. ಆದಿತ್ಯವಾರ ಪೊಲೀಸರು ಘಟನೆ ನಡೆದ ಸ್ಥಳವನ್ನು ಸೀಲ್ ಮಾಡಿದರು. ಅಷ್ಟರಲ್ಲಿ ಸಾಕ್ಷ್ಯಗಳು ನಾಶವಾಗಿದ್ದವು ಎಂದು ತಿಳಿದು ಬಂದಿದೆ.