ಉತ್ತರಾಖಂಡ್ ನ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್‌ನಲ್ಲೂ ರಿಲೀಫ್ ಇಲ್ಲ;ಜುಲೈ 12ಕ್ಕೆ ವಿಚಾರಣೆ ಮುಂದೂಡಿಕೆ
ಹೊಸದಿಲ್ಲಿ, ಮೇ 9: ತಮ್ಮ ಅರ್ಜಿಯನ್ನು ವಜಾಗೊಳಿರುವ ಉತ್ತರಾಖಂಡ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅನರ್ಹಗೊಂಡ 9 ಮಂದಿ ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇಂದು ಯಾವುದೇ ಆದೇಶ ನೀಡದೆ ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಿದೆ. ಇದರೊಂದಿಗೆ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್‌ನಲ್ಲೂ ಪರಿಹಾರ ದೊರೆತಿಲ್ಲ.
ಮಂಗಳವಾರ ಉತ್ತರಾಖಂಡ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಹಿನ್ನೆಲೆಯಲ್ಲಿ ಅನರ್ಹಗೊಂಡ ಶಾಸಕರು ಉತ್ತರಾಖಂಡ್ ಹೈಕೊರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಯಾವುದೇ ಆದೇಶ ನೀಡದೆ ವಿಚಾರಣೆಯನ್ನು ಮಂದೂಡಿದೆ. ಅನರ್ಹ ಶಾಸಕರಿಗೆ ವಿಶ್ವಾಸ ಮತಯಾಚನೆಯ ಸಭೆಯಲ್ಲಿ ಭಾಗವಹಿಸುವ ಅವಕಾಶ ದೂರವಾಗಿದೆ. ಹೈಕೋರ್ಟ್ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ."ಅನರ್ಹ ಶಾಸಕರು ಸದನ ಪ್ರವೇಶಿಸುವಂತಿಲ್ಲ. ವಿಶ್ವಾಸಮತ ಯಾಚನೆ ವೇಳೆ ಮತದಾನ ಮಾಡುವಂತಿಲ್ಲ "ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದೇ ವೇಳೆ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿ ಸ್ವೀಕರ‍್ ಗೋವಿಂದ ಕುಂಜವಾಲ ಮತ್ತು ಮುಖ್ಯ ಮಂತ್ರಿ ಹರೀಶ್ ರಾವತ್‌ಗೆ ನೋಟಿಸ್ ಜಾರಿ ಮಾಡಿದೆ.
ಅನರ್ಹಗೊಂಡ ಶಾಸಕರ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಹೈಕೋರ್ಟ್ ಸ್ವೀಕರ‍್ ಗೋವಿಂದ ಕುಂಜವಾಲ ಆದೇಶವನ್ನು ಎತ್ತಿ ಹಿಡಿದು, ಶಾಸಕರ ಮನವಿಯನ್ನು ತಿರಸ್ಕರಿಸಿತ್ತು.
ಅನರ್ಹಗೊಂಡ ಶಾಸಕರ ಅರ್ಜಿಯನ್ನು ಇಂದು ವಜಾಗೊಳಿಸಿದ್ದ ಹೈಕೋರ್ಟ್ ಮಂಗಳವಾರ ನಡೆಯಲಿರುವ ವಿಸ್ವಾಸಮತದ ವೇಳೆ ಅನರ್ಹಗೊಂಡ ಶಾಸಕರಿಗೆ ಮತದಾನದ ಹಕ್ಕು ಇಲ್ಲ ಮತ್ತು ವಿಶ್ವಾಸಮತ ಯಾಚನೆಯ ಸಭೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ ಶಾಸಕರು ಸುಪ್ರೀಂಕೊರ್ಟ್‌ನ ಮೊರೆ ಹೋಗಿದ್ದರು.
ಮುಖ್ಯ ಮಂತ್ರಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರಕಾರದ 9 ಮಂದಿ ಶಾಸಕರು ಬಂಡಾಯ ಎದ್ದು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಅನರ್ಹಗೊಂಡ 9 ಮಂದಿ ಶಾಸಕರು ಅನರ್ಹಗೊಳಿಸಿದ್ದ ಸ್ವೀಕರ್ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.