ನೊಯಿಡಾ: ಕಬರ್‌ಸ್ಥಾನವಿಲ್ಲದೆ 24 ಗಂಟೆವರೆಗೆ ಮುಸ್ಲಿಮ್ ವ್ಯಕ್ತಿಯ ಮೃತದೇಹ ದಫನಕ್ಕೆ ಬಾಕಿ!
ನೊಯಿಡಾ, ಮೇ 9: ನೋಯಿಡಾದ ಅಲಾಹಾಬಾದ್ ಗ್ರಾಮದಲ್ಲಿ ಮುಸ್ಲಿಮ್ ಸಮುದಾಯದ ಹಿರಿಯ ವ್ಯಕ್ತಿಯೊಬ್ಬರ ಶವ 24 ಗಂಟೆ ದಫನಗೈಯ್ಯಲು ಸ್ಥಳವಿಲ್ಲದೆ ಬಾಕಿಯಾಗಿತ್ತು ಎಂದು ವರದಿಯಾಗಿದೆ. ನೊಯಿಡಾ ಫೆಜ್-2 ಇಲ್ಲಿನ ಪೊಲೀಸರ ಪ್ರಕಾರ ಶನಿವಾರ ಗ್ರಾಮದ ನಿವಾಸಿ 65ವರ್ಷದ ಮಹ್ಮೂದ್ ಎಂಬ ಹಿರಿಯ ವ್ಯಕ್ತಿ ನಿಧನ ಹೊಂದಿದ್ದರು. ಕುಟುಂಬದವರು ಅವರನ್ನು ದಫನಗೈಯ್ಯಲು ಸಿದ್ಧರಾಗುತ್ತಿದ್ದರು. ಆಗ ಮಹಾವೀರ್ ಸಿಂಗ್ ಎಂಬ ವ್ಯಕ್ತಿ ತನ್ನ ಜಮೀನಿನಲ್ಲಿ ಶವವನ್ನು ಧಪನ ಮಾಡಬಾರದು ಎಂದು ಅಡ್ಡಬಂದರು. ಮಹಾವೀರ್ ಸಿಂಗ್‌ರ ಪೂರ್ವಜರು 1200 ಚದರ ಮೀಟರ್ ಖಾಲಿ ಜಮೀನನ್ನು ಧಾರ್ಮಿಕ ರೀತಿಯಲ್ಲಿ ಶವದಫನ ಮಾಡಲು ಮುಸ್ಲಿಮ್ ಸಮುದಾಯಕ್ಕೆ ನೀಡಿದ್ದರು. ಆದರೆ ಜಮೀನಿನ ಒಡೆತನದ ಹಕ್ಕು ಕುರಿತು ಅವರು ಕೋರ್ಟ್‌ಗೆ ಮೊರೆ ಹೋಗಿದ್ದು ಇದೀಗ ಅವರ ಪರ ತೀರ್ಪು ಬಂದಿದೆ ಎಂದು ಹೇಳಿ ಮೃತದೇಹ ದಫನಗೈಯದಂತೆ ತಡೆದಿದ್ದರು. ಹೀಗೆ ಮಹಾವೀರ್ ಹೇಳಿದ ಬಳಿಕ ಉಪಾಯವಿಲ್ಲದೆ ಮಹ್ಮೂದ್‌ರ ಶವವನ್ನು ಮನೆಗೆ ತಂದು ಇಪ್ಪತ್ತನಾಲ್ಕು ಗಂಟೆಕಾಲ ಮಂಜುಗಡ್ಡೆಯಲ್ಲಿ ಮುಚ್ಚಿ ಇಡಲಾಯಿತು. ಮಹ್ಮೂದ್‌ರ ಸಂಬಂಧಿಕ ಶಮೀಉದ್ದೀನ್ ತಿಳಿಸಿರುವ ಪ್ರಕಾರ ಶವದಫನಕ್ಕೆ ಬಿಡದ್ದರಿಂದ ಗ್ರಾಮದಲ್ಲಿ ಜನರು ಗುಂಪುಗೂಡುತ್ತಿದ್ದಾರೆಂದು ನಗರ ಮ್ಯಾಜಿಸ್ಟ್ರೇಟ್ ಬಚ್ಚೂ ಸಿಂಗ್ ಸಹಿತ ಪೊಲೀಸರಿಗೆ ಎಂದು ತಿಳಿಯಿತು. ಅವರು ಮಾತುಕತೆ ನಡೆಸಿದ ಬಳಿಕ ಗ್ರಾಮದ ರಾಜೇಂದ್ರ ಪ್ರಧಾನ್ ಎಂಬವರು ತನ್ನ 1000 ಚದರ ಮೀಟರ್ ಜಮೀನನ್ನು ಕಬರ್‌ಸ್ಥಾನಕ್ಕಾಗಿ ದಾನ ನೀಡಿದರು.ಆ ಮೂಲಕ ಸಮಸ್ಯೆ ಬಗೆಹರಿಯಿತು. ಮೃತದೇಹ ದಫನ ಕಾರ್ಯದ ವಿಷಯದಲ್ಲಿ ಗ್ರಾಮದಲ್ಲಿ ಮತ್ತೊಮ್ಮೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ರಾಜೇಂದ್ರ ಪ್ರಧಾನ್‌ರ ಜಮೀನು ದಾನದ ಮೂಲಕ ಪ್ರಕರಣ ಸುಖಾಂತ್ಯವಾಗಿದೆ ಎಂದು ವರದಿಯಾಗಿದೆ.