ಪನಾಮಾ ಇನ್ನಷ್ಟು ಮಾಹಿತಿ ಹೊರಕ್ಕೆ; 2 ಸಾವಿರ ಭಾರತೀಯರ ವಿವರ ಬಹಿರಂಗ

Update: 2016-05-10 18:21 GMT

ಹೊಸದಿಲ್ಲಿ, ಮೇ 10: ವಿವಿಧ ತೆರಿಗೆ ಸ್ವರ್ಗ ದೇಶಗಳಲ್ಲಿ ಸಾಗರೋತ್ತರ ಹೂಡಿಕೆ ಮಾಡಿರುವ ಕಂಪೆನಿಗಳ ವಿವರವಾದ ಮಾಹಿತಿಯನ್ನು ಐಸಿಐಜೆ ಭಾರೀ ಪ್ರಮಾಣದ ‘ಪನಾಮಾ ಪೇಪರ್ಸ್’ ಮೂಲಕ ಬಹಿರಂಗಪಡಿಸಿದೆ. ಅವುಗಳಲ್ಲಿ ಭಾರತದ 2 ಸಾವಿರದಷ್ಟು ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಹಾಗೂ ವಿಳಾಸಗಳಿಗೆ ಸಂಬಂಧ ಹೊಂದಿರುವ ಸಾವಿರಾರು ದಾಖಲೆಗಳು ಸೇರಿವೆ.

ನೆವಾಡದಿಂದ ಬ್ಯಾಂಕಾಕ್ ತನಕ ಹಾಗೂ ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ಗಳಲ್ಲಿ 21 ನ್ಯಾಯಾಂಗ ವ್ಯಾಪ್ತಿಗಳಲ್ಲಿ ಸೃಷ್ಟಿಸಲಾಗಿರುವ ಸುಮಾರು 2.14ಲಕ್ಷ ಸಾಗರೋತ್ತರ ಸಂಸ್ಥೆಗಳ ಗುಟ್ಟನ್ನು ಬಯಲುಗೊಳಿಸುವ, ಹುಡುಕಬಲ್ಲಂತಹ ಮಾಹಿತಿ ಮೂಲವನ್ನು ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟವು (ಐಸಿಐಜೆ) ಸೋಮವಾರ ಬಹಿರಂಗಪಡಿಸಿದೆ.

ಪನಾಮಾ ಪೇಪರ್ಸ್ ತನಿಖೆಯ ಭಾಗವಾಗಿರುವ ಈ ಮಾಹಿತಿಯು, ಸಾಗರೋತ್ತರ ಸಂಸ್ಥೆಗಳು ಹಾಗೂ ಅವುಗಳ ಹಿಂದಿರುವ ವ್ಯಕ್ತಿಗಳ ಕುರಿತು ಇದುವರೆಗೆ ಬಹಿರಂಗಗೊಳಿಸಲಾಗಿರುವ ಮಾಹಿತಿಗಳಲ್ಲೇ ಅತಿ ವಿಸ್ತೃತವಾದುದಾಗಿದೆ. ಇದು, ಲಭ್ಯವಾದಾಗ ಆ ಅಪಾರದರ್ಶಕ ರಚನೆಗಳ ವಾಸ್ತವ ಮಾಲಕರ ಹೆಸರುಗಳನ್ನೂ ಒಳಗೊಂಡಿದೆಯೆಂದು ಒಕ್ಕೂಟವು ತನ್ನ ಇತ್ತೀಚಿನ ಸಂದೇಶದಲ್ಲಿ ತಿಳಿಸಿದೆ.

ಭಾರತಕ್ಕೆ ಸಂಬಂಧಿಸಿದ ಈ ಮಾಹಿತಿ ಮೂಲದ ಒಟ್ಟ್ಟಾರೆ ಪರಿಶೀಲನೆಯು ಸುಮಾರು 22 ಸಾಗರೋತ್ತರ ಸಂಸ್ಥೆಗಳು, 1,046 ಮಂದಿ ಅಧಿಕಾರಿಗಳು ಹಾಗೂ ವ್ಯಕ್ತಿಗಳ ಸಂಬಂಧ, 42 ಮಧ್ಯವರ್ತಿ ಸಂಸ್ಥೆಗಳು ಹಾಗೂ ದೇಶದೊಳಗಿನ ಸುಮಾರು 828 ವಿಳಾಸಗಳನ್ನೊಳಗೊಂಡಿದೆ. ಇವುಗಳು ದಿಲ್ಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈಯಂತಹ ಮಹಾನಗರಗಳಿಂದ ತೊಡಗಿ ಹರ್ಯಾಣದ ಸಿರ್ಸಾ ಬಿಹಾರದ ಮುಝಫ್ಫರ್‌ಪುರ, ಮಧ್ಯಪ್ರದೇಶದ ಮಂದಾಸ್‌ರ್‌ಗಳಂತಹ ಹಳ್ಳಿಗಾಡು ಪ್ರದೇಶಗಳವರೆಗಿನ ಹಾಗೂ ಭೋಪಾಲಗಳಂತಹ ಹಿಂದುಳಿದ ಹಾಗೂ ಐಶಾರಾಮಿ ಸ್ಥಳಗಳ ವಿಳಾಸಗಳಾಗಿವೆ.

ಸಂಘಟನೆಯ ಜಾಲ ತಾಣದಲ್ಲಿ ನೀಡಲಾಗಿರುವ ಹೆಸರು ಮತ್ತು ವಿಳಾಸಗಳು ಭಾರತೀಯ ಹೆಸರುಗಳು ಹಾಗೂ ವಿಳಾಸಗಳು, ಅವರ ಹೂಡಿಕೆ ಕಂಪೆನಿಗಳ ಗುರುತು ಮಾತ್ರವಲ್ಲದೆ, ಕೆಲವು ಪ್ರಕರಣಗಳಲ್ಲಿ ಸಂಸ್ಥೆಗಳನ್ನು ಆರಂಭಿಸಲಾಗಿರುವ ದಿನಾಂಕಗಳನ್ನೂ ನಮೂದಿಸಿದೆ.

ಐಸಿಐಜೆ ಈಗ ಬಹಿರಂಗಪಡಿಸಿರುವ ಹೊಸ ಮಾಹಿತಿಯು ಮೊಸ್ಸಾಕ್ ಫೊನ್ಸೆಕಾದಿಂದ ಸೋರಿಕೆಯಾಗಿರುವ 1.15 ಕೋಟಿ ದಾಖಲೆಗಳ ರಾಶಿಯ ಒಂದು ಭಾಗವಷ್ಟೇ ಆಗಿದೆಯೆಂದು ಗುಂಪು ತಿಳಿಸಿದೆ. ಮೊಸ್ಸಾಕ್ ಫೊನ್ಸೆಕಾ ಪತ್ತೆ ಹಚ್ಚಲು ಅಸಾಧ್ಯವಾದ ಕಂಪೆನಿಗಳು, ಟ್ರಸ್ಟ್‌ಗಳು ಹಾಗೂ ಪ್ರತಿಷ್ಠಾನಗಳು ವಿಶ್ವದ ಅಗ್ರ ಸೃಷ್ಟಿಕರ್ತರಲ್ಲಿ ಒಂದಾಗಿದೆ.

ಸೋರಿಕೆಯಾದ ಮಾಹಿತಿಯು 1977ರಿಂದ 2015ರ ಅಂತದವರೆಗಿನ ಸುಮಾರು 40 ವರ್ಷಗಳದಾಗಿದೆಯೆಂದು ಸಂಘಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News