ರಾಕಿ ಯಾದವ್ ತಾಯಿ ಎಂಎಲ್‌ಸಿ ಮನೋರಮಾ ದೇವಿ ನಾಪತ್ತೆ
ಪಾಟ್ನಾ, ಮೇ 11: ಕಾರನ್ನು ಓವರ್‌ಟೇಕ್ ಮಾಡಿದ ತಪ್ಪಿಗಾಗಿ ಯುವಕನನ್ನು ಗುಂಡು ಹಾರಿಸಿ ಕೊಲೆ ನಡೆಸಿದ ಪ್ರಕರಣದ ಆರೋಪಿ ರಾಕಿ ಯಾದವ್‌ಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆತನ ತಾಯಿ ಎಂಎಲ್‌ಸಿ ಮನೋರಮಾ ದೇವಿ ನಾಪತ್ತೆಯಾಗಿದ್ದಾರೆ.
ಇದೇ ವೇಳೆ ಮನೋರಮಾ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿ ರಾಕಿ ಯಾದವ್‌ಗೆ ಶೋಧ ನಡೆಸಿದಾಗ ಮನೆಯಲ್ಲಿ ಮದ್ಯದ ಬಾಟ್ಲಿಗಳು ಪತ್ತೆಯಾಗಿದೆ. ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಮದ್ಯ ಸಂಗ್ರಹಿಸಿಟ್ಟಿರುವುದು ಕಾನೂನು ಬಾಹಿರವಾಗಿದ್ದು, ಕಳೆದ ಎಪ್ರಿಲ್ 1ರಿಂದ ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಾಗಿತ್ತು.ಇದೀಗ ಮನೋರಮಾ ದೇವಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾನೂನನ್ನು ಉಲ್ಲಂಘಿಸಿದ ಮನೋರಮಾ ದೇವಿ ಅವರನ್ನು ಮುಖ್ಯ ಮಂತ್ರಿ ನಿತೀಶ್ ಕುಮಾರ್ ಮಂಗಳವಾರ ರಾತ್ರಿ ಜೆಡಿಯು ಪಕ್ಷದಿಂದ ಅಮಾನತುಗೊಳಿಸಿದ್ದಾರೆ.
ಪೊಲೀಸರು ಮನೋರಮಾ ದೇವಿ ಬಂಧನಕ್ಕೆ ಶೋಧ ನಡೆಸುತ್ತಿರುವಾಗಲೇ ಆಕೆ ಮನೆಯಿಂದ ನಾಪತ್ತೆಯಾಗಿದ್ದಾರೆ. ಪೊಲೀಸರು ಮನೆಗೆ ಬೀಗ ಜಡಿದಿದ್ದಾರೆ.