×
Ad

ಅಕ್ಕ - ತಮ್ಮನ ಜೋಡಿ ಮಾಡಿದ ಮೋಡಿ

Update: 2016-05-11 10:45 IST

ಕರ್ನಾಲ್, ಮೇ 11: ಪಾನಿಪತ್ ಜಿಲ್ಲೆಯ ಶಹರಾಮಲ್ಪುರ ಗ್ರಾಮದ ದುಹಾನ್ ಕುಟುಂಬದಲ್ಲಿ ಮಂಗಳವಾರ ಸಂತಸದ ಅಲೆ ಮೂಡಿತ್ತು. ಕುಟುಂಬದ ಕಣ್ಮಣಿಗಳಾದ ಶಾಲಿನಿ ಹಾಗೂ ಅಲೇಖ್ ಇಬ್ಬರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಎಲ್ಲರಿಗೂ ಹೆಮ್ಮೆ ತಂದಿದ್ದಾರೆ.

ಶಾಲಿನಿ ತನ್ನ ಮೂರನೇ ಪ್ರಯತ್ನದಲ್ಲಿ 21ನೆ ರ್ಯಾಂಕ್ ಪಡೆದರೆ ಆಕೆಯ ಸಹೋದರ ಅಲೇಖ್ ತನ್ನ ಪ್ರಥಮ ಪ್ರಯತ್ನದಲ್ಲಿಯೇ 483ನೆ ರ್ಯಾಂಕ್ ಪಡೆದಿದ್ದಾನೆ. ಅವರ ತಾಯಿ ಸುನೀತಾ ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿಯಾದರೆ ತಂದೆ ಸಿಐಎಸ್‌ಎಫ್ ಸೇವೆಯಲ್ಲಿದ್ದಾರೆ.

ಶಾಲಿನಿ 2012ರಲ್ಲಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅಬಕಾರಿ ನಿರೀಕ್ಷಕಿಯಾಗಿ ತನ್ನ ವೃತ್ತಿಯನ್ನು ಆರಂಭಿಸಿದ್ದರೆ, ನಂತರ ಯುಪಿಎಸ್‌ಸಿ ಪರೀಕ್ಷೆಯತ್ತ ಗಮನ ಹರಿಸಿ ಇದೀಗ ಎಲ್ಲರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾಳೆ. 21ನೆ ರ್ಯಾಂಕ್ ನೊಂದಿಗೆ ಆಕೆಗೆ ಐಎಎಸ್ ಪೋಸ್ಟಿಂಗ್ ಸಿಗುವುದೆಂಬ ಭರವಸೆಯಿದ್ದು ಆಕೆ ಐಆರ್‌ಎಸ್ ಹಾಗು ಐಪಿಎಸ್ ಸೇವೆಗೂ ಅಯ್ಕೆಯಾಗಿದ್ದಾಳೆ.

ಯುಪಿಎಸ್‌ಸಿಯಲ್ಲಿ ತನ್ನ ಪ್ರಥಮ ಪ್ರಯತ್ನದಲ್ಲಿ 190ನೆ ರ್ಯಾಂಕ್ ಪಡೆದಿದ್ದ ಶಾಲಿನಿ, ಎರಡನೇ ಪ್ರಯತ್ನದಲ್ಲಿ 100ನೆ ರ್ಯಾಂಕ್ ಪಡೆದು ಈಗ ಮೂರನೇ ಪ್ರಯತ್ನದಲ್ಲಿ ಇನ್ನೂ ಉತ್ತಮ ನಿರ್ವಹಣೆ ತೋರಿದ್ದಾಳೆ. ಇಪ್ಪತೈದು ವರ್ಷದ ಶಾಲಿನಿ ತನ್ನ ಈ ಸಾಧನೆ ತನ್ನ ಕುಟುಂಬದ ಸಂಪೂರ್ಣ ಸಹಕಾರದಿಂದ ಸಾಧ್ಯವಾಗಿದೆಯೆಂದು ವಿವರಿಸುತ್ತಾಳೆ.

ತನ್ನ ಸಹೋದರ ಕೂಡ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಆಕೆಯೇ ಪ್ರೇರಣೆಯಾಗಿದ್ದಾಳೆ. ‘‘ನಾವಿಬ್ಬರೂ ಜತೆಯಾಗಿ ಓದಿದೆವು. ಆಕೆ ನನಗೆ ಸ್ಫೂರ್ತಿ,’’ಎಂದು ಶಾಲಿನಿ ಬಗ್ಗೆ ಆಕೆಯ ಸಹೋದರ ಹೆಮ್ಮೆಯಿಂದ ಹೇಳುತ್ತಾನೆ. ತನ್ನ ನಿರ್ವಹಣೆಯನ್ನು ಇನ್ನೂ ಸುಧಾರಿಸಲು ತಾನು ಮತ್ತೆ ಪರೀಕ್ಷೆ ಬರೆಯುವುದಾಗಿ ಅಲೇಖ್ ಹೇಳಿದ್ದಾನೆ.
ಶಾಲಿನಿ ಹಾಗೂ ಅಲೇಖ್ ಇಬ್ಬರೂ ಬಿ.ಟೆಕ್ ಪದವೀಧರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News