ಮನೆ, ಊಟ ಸಿಗಲು 'ಶುಭಂ' ಆಗಬೇಕಾದ ಅನ್ಸಾರ್ ಶೇಖ್ ಈಗ ಐಎಎಸ್ ಅಧಿಕಾರಿ !
ಪೂಣೆ, ಮೇ 11: ಆತನಿಗಿನ್ನೂ 21 ವರ್ಷ ವಯಸ್ಸು ಆದರೆ ಆತ ತನ್ನ ಪ್ರಥಮ ಪ್ರಯತ್ನದಲ್ಲೇ ಪ್ರತಿಷ್ಠಿತ ಕೇಂದ್ರ ಲೋಕ ಸೇವಾ ಆಯೋಗ ( UPSC) ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾನೆ. ರಾಷ್ಟ ಮಟ್ಟದಲ್ಲಿ 361ನೆ ರ್ಯಾಂಕ್ ಪಡೆದಿದ್ದಾನೆ.
ಇದು ಅಸಮಾನ್ಯ ಸಾಧನೆ. ಆದರೆ ಈ ವಿಶೇಷ ಸಾಧನೆಯಲ್ಲಿ ಇನ್ನೊಂದು ವೈಶಿಷ್ಟ್ಯವೂ ಇದೆ.
ಈ ಸಾಧಕನ ಹೆಸರು 'ಶುಭಂ', ಅಲ್ಲಲ್ಲ ಅನ್ಸಾರ್ ಅಹ್ಮದ್ ಶೇಖ್.
ಜಾಲ್ನಾದ ಶೆಡ್ಗಾವ್ನ್ ಎಂಬ ಗ್ರಾಮದ ಆಟೋ ರಿಕ್ಷಾ ಚಾಲಕನೊಬ್ಬನ ಪುತ್ರನಾದ ಅನ್ಸಾರ್ ಪದವಿ ಪಡೆಯಲು ಹಾಗೂ UPSC ಪರೀಕ್ಷೆಗೆ ತಯಾರಿ ನಡೆಸಲು ಪೂಣೆಗೆ ಬಂದರು. ಅಲ್ಲಿನ ಫೆರ್ಗೂಸನ್ ಕಾಲೇಜಿನಲ್ಲಿ ದಾಖಲಾತಿ ಪಡೆದರು. ಅದರ ನಂತರ ಅವರ ಸಮಸ್ಯೆಯ ಸರಮಾಲೆ ಪ್ರಾರಂಭವಾಯಿತು. ತಮ್ಮ ಹಿಂದೂ ಸ್ನೇಹಿತರೊಂದಿಗೆ ರೂಮ್ ಪಡೆಯಲು ಹೋದಾಗ ಉಳಿದರವರೆಲ್ಲರಿಗೆ ರೂಮ್ ಸಿಕ್ಕಿದರೂ ಅನ್ಸಾರ್ ಗೆ ಮಾತ್ರ ಸಿಗುತ್ತಿರಲಿಲ್ಲ. ಮುಸ್ಲಿಂ ಹೆಸರು ಕೇಳಿದೊಡನೆ ಹೆಚ್ಚಿನ ಮನೆ ಮಾಲಕರು ರೂಮ್ ಬಾಡಿಗೆಗೆ ನೀಡಲು ನಿರಾಕರಿಸುತ್ತಿದ್ದರು. ಕೊನೆಗೆ ಬೇರೆ ದಾರಿ ಕಾಣದೆ ಅನ್ಸಾರ್ 'ಶುಭಂ' ಆದರು. ಮನೆ ಮಾಲಕರ ಬಳಿ ನನ್ನ ಹೆಸರು 'ಶುಭಂ' ಎಂದರು. ನಿಜವಾಗಿ ಅದು ಅನ್ಸಾರ್ ರ ಸ್ನೇಹಿತನೊಬ್ಬನ ಹೆಸರಾಗಿತ್ತು.
"ಆದರೆ ಇನ್ನು ನಾನು ಸುಳ್ಳು ಹೆಸರು ಹೇಳಬೇಕಾಗಿಲ್ಲ. ನನ್ನನ್ನು ಅನ್ಸಾರ್ ಅಹ್ಮದ್ ಶೇಖ್ ಎಂದೇ ಕರೆಯಿರಿ" ಎಂದು ಹೆಮ್ಮೆಯಿಂದ ಹೇಳುತ್ತಾರೆ ಅನ್ಸಾರ್.
ಅನ್ಸಾರ್ ಅವರದ್ದು ತೀರ ಸಾಮಾನ್ಯ ಕುಟುಂಬ ಅವರ ತಂದೆಗೆ ಮೂವರು ಪತ್ನಿಯರು. ಅನ್ಸಾರ್ ರ ತಾಯಿ ಆ ಪೈಕಿ 2ನೆ ಅವರು. ಅನ್ಸಾರ್ ರ ಸಹೋದರ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದ್ದಾನೆ. ಬೇಗ ಮದುವೆಯಾಗಿರುವ ಅವರ ಇಬ್ಬರು ಸೋದರಿಯರೂ ಪಡೆದಿರುವ ಶಿಕ್ಷಣ ಅಷ್ಟಕಷ್ಟೇ. ಅನ್ಸಾರ್ ಮಂಗಳವಾರ ಮನೆಗೆ ಕಾಲ್ ಮಾಡಿ "ನಾನು UPSC ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದೇನೆ. ಬಹುತೇಕ IAS ಅಧಿಕಾರಿಯೇ ಆಗುತ್ತೇನೆ" ಎಂದು ಹೇಳಿದಾಗ ಮನೆಯವರಿಗೆ ನಂಬುವುದೇ ಕಷ್ಟವಾಯಿತಂತೆ.
ಅನ್ಸಾರ್ ಶಾಲಾ ದಿನಗಳಿಂದಲೇ ಕಲಿಕೆಯಲ್ಲಿ ಮುಂದಿದ್ದರು. ಆದರೆ 10ನೆ ತರಗತಿಯಲ್ಲಿ ಮಾತ್ರ ಸ್ವಲ್ಪ ಕಡಿಮೆ ಅಂಕ ಪಡೆದಿದ್ದರು.
UPSC ಪರೀಕ್ಷೆಗಾಗಿ ಸತತ ಮೂರು ವರ್ಷಗಳ ಕಾಲ ಪ್ರತಿದಿನ 10 ರಿಂದ 12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು.
ವಿದ್ಯಾರ್ಥಿಗಳು ತಾವು ಈ ವ್ಯವಸ್ಥೆಯಲ್ಲಿ ಯಾಕಿದ್ದೇವೆ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು. ಅದಕ್ಕೆ ಉತ್ತರ ಪಡೆದರೆ ಮತ್ತೆ ಮುಂದಿನ ದಾರಿ ಸ್ಪಷ್ಟವಾಗುತ್ತದೆ ಎಂದು ಹೇಳುವ ಅನ್ಸಾರ್ ತಾನು ಧಾರ್ಮಿಕ ಕಾರಣದಿಂದ ತಾರತಮ್ಯಕ್ಕೆ ಒಳಗಾಗಿದ್ದರೂ IAS ಅಧಿಕಾರಿಯಾಗಿ ಹಿಂದೂ-ಮುಸ್ಲಿಮರ ನಡುವಿನ ಅಂತರ ಕಡಿಮೆ ಮಾಡಲು ಹಾಗೂ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.