ಸುಬ್ರತಾ ರಾಯ್ ಗೆ ಜುಲೈ 11ರ ತನಕ ಪೆರೋಲ್ ವಿಸ್ತರಣೆ
ಹೊಸದಿಲ್ಲಿ, ಮೇ 11: ಬಹುಕೋಟಿ ಹಗರಣ ಆರೋಪದಲ್ಲಿ ಜೈಲುಪಾಲಾಗಿರುವ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ನೀಡಲಾಗಿದ್ದ ಪೆರೋಲ್ ಅವಧಿಯನ್ನು ಜುಲೈ 11ರ ತನಕ ಸುಪ್ರೀಂ ಕೋರ್ಟ್ ಇಂದು ವಿಸ್ತರಿಸಿದೆ.
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠ ಮೇ 7ರಂದು ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯ 4 ವಾರಗಳ ಕಾಲ ಶರತ್ತು ಬದ್ಧ ಪೆರೋಲ್ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು.
67ರ ಹರೆಯದ ಸುಬ್ರತಾ ರಾಯ್ 2014 ಮಾರ್ಚ್‌ನಲ್ಲಿ ಜೈಲು ಸೇರಿದ್ದರು. . ತಾಯಿಯ ಅಂತ್ಯಕ್ರಿಯೆ ನಡೆಸಲು ಪೆರೋಲ್ ಮೂಲಕ ಬಿಡುಗಡೆಗೆ ಸುಬ್ರತಾ ರಾಯ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಅವರಿಗೆ ತಾತ್ಕಾಲಿಕ ಪೆರೋಲ್ ಮಾನವೀಯ ನೆಲೆಯಲ್ಲಿ ಲಭಿಸಿತ್ತು. ಇದೀಗ ಅವರಿಗೆ ಸೆಬಿಯಲ್ಲಿ 200 ಕೋಟಿ ರೂ. ಠೇವಣಿಯನ್ನು ಇಡಲು ಅನುಕೂಲವಾಗುವಂತೆ ಪೆರೋಲ್ ಅವಧಿಯನ್ನು ವಿಸ್ತರಿಸಲಾಗಿದೆ.
ಒಂದುವೇಳೆ ಈ ಅವಧಿಯಲ್ಲಿ ಠೇವಣಿ ಇರಿಸಲು ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಮತ್ತು ಸಹರಾ ಗ್ರೂಪ್ ನಿರ್ದೇಶಕ ಅಶೋಕ್ ರಾಯ್ ಚೌದರಿ ವಿಫಲರಾದರೆ ಜುಲೈ 11ರಂದು ನ್ಯಾಯಾಲಯಕ್ಕೆ ಶರಣಾಗಿ ತಿಹಾರ್ ಜೈಲಿಗೆ ತೆರಳಲು ನ್ಯಾಯಾಲಯ ಸೂಚಿಸಿದೆ.