ಅಲಹಾಬಾದ್ ವಿವಿ ವಿಸಿಯಿಂದ ಕೇಂದ್ರಸರಕಾರದ ವಿರುದ್ಧ ಟೀಕೆ
ಅಲಹಾಬಾದ್, ಮೇ 11: ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ನಡೆಸುತ್ತಿರುವ ರಾಜಕೀಯ ಹಸ್ತಕ್ಷೇಪಕ್ಕಾಗಿ ಉಪಕುಲಪತಿ ಆರ್. ಎಲ್. ಹಂಗ್ಲೂ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿದ್ದಾರೆಂದು ವರದಿಯಾಗಿದೆ. ರಾಜಕೀಯ ಹಸ್ತಕ್ಷೇಪದಿಂದಾಗಿ ವಿಶ್ವವಿದ್ಯಾನಿಲಯದ ಆಡಳಿತವೇ ಸ್ಥಗಿತಗೊಂಡಿದೆ. ಇದೊಂದು ಕೇಂದ್ರೀಯ ವಿಶ್ವವಿದ್ಯಾನಿಲಯ ಮತ್ತು ಇದನ್ನು ಪೂರ್ವದ ಆಕ್ಸ್‌ಫರ್ಡ್ ಎಂದು ಕರೆಯಲಾಗುತ್ತಿತ್ತು. ಹೀಗೆಯೇ ರಾಜಕೀಯ ಹಸ್ತಕ್ಷೇಪ ಮುಂದುವರಿದರೆ ವಿಶ್ವವಿದ್ಯಾನಿಲಯ ತನ್ನ ಹಿಂದಿನ ಪ್ರತಿಷ್ಠೆಯನ್ನು ಮರಳಿ ಗಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಬಿಜೆಪಿ ನಾಯಕರು ಅಲಹಾಬಾದ್ ವಿಶ್ವವಿದ್ಯಾನಿಲಯದ ಉಪಕುಲಪತಿ ವಿರುದ್ಧ ಉಗ್ರ ಟೀಕೆ ಮಾಡಿದ್ದರು.
ಯಾವುದೇ ವಿಶ್ವವಿದ್ಯಾನಿಲಯ ರಾಜಕಾರಣಿಗಳ ಪ್ರಕಾರ ನಡೆಯಬೇಕೆಂದಾದರೆ ಅದಕ್ಕೆ ಶಾಸಕರನ್ನುಮತ್ತು ಸಂಸದರನ್ನು ಕರೆ ತಂದು ಉಪಕುಲಪತಿಗಳನ್ನಾಗಿ ಕೂರಿಸುವುದೇ ಉತ್ತಮ ಎಂದು ಅವರು ಟೀಕಿಸಿದ್ದಾರೆಂದು ವರದಿಯಾಗಿದೆ.
ಪೋಸ್ಟ್ ಗ್ರಾಜುವೇಟ್ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸ್ವೀಕರಿಸುವ ವಿಶ್ವವಿದ್ಯಾನಿಲಯದ ನಿರ್ಧಾರವನ್ನು ಬಿಜೆಪಿ ನಾಯಕರು ವಿರೋಧಿಸಿದ್ದರು. ಇದಕ್ಕೆ ಸಂಬಂಧಿಸಿ ಬಿಜೆಪಿ ಸಂಸದರು ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿಯನ್ನು ಭೇಟಿಯಾಗಿದ್ದರು. ಆನಂತರ ವಿಶ್ವವಿದ್ಯಾನಿಲಯ ಎಂಟ್ರೆನ್ಸ್ ಟೆಸ್ಟ್‌ಗೆ ಆಫ್‌ಲೈನ್ ಅರ್ಜಿಗಳನ್ನು ಕೂಡಾ ಸ್ವೀಕರಿಸಲಾಗುವುದು ಎಂದು ಹೇಳಿತ್ತು.
ಮೇ 5ರಂದು ಬಿಜೆಪಿ ಸಂಸದರು ಮತ್ತು ಶಾಸಕರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಈ ವಿಷಯವನ್ನು ಸರಿಯಾಗಿ ನಿಭಾಯಿಸಬೇಕೆಂದು ತಾಕೀತು ನೀಡಿದ್ದರು. ಅಲಹಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಸಂಘದ ಉಪಾಧ್ಯಕ್ಷ ಮತ್ತು ಪ್ರಧಾನಕಾರ್ಯದರ್ಶಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ವಿದ್ಯಾರ್ಥಿ ಸಂಘದ ಈ ಎರಡು ಸ್ಥಾನಗಳಲ್ಲಿ ಎಬಿವಿಪಿ ಇದೆ. ದೂರಶಿಕ್ಷಣ ವಿಭಾಗದಲ್ಲಿ ಇಂಟರ್‌ನೆಟ್ ಇಲ್ಲ. ಹೀಗಿರುವಾಗ ಆಫ್‌ಲೈನ್ ಅರ್ಜಿಯನ್ನು ಸ್ವೀಕರಿಸಬೇಕೆಂಬ ಬೇಡಿಕೆ ಮುಂದಿಟ್ಟು ಎಬಿವಿಪಿ ಉಪವಾಸಕ್ಕಿಳಿದಿದೆ. ಇತ್ತ ಇನ್ನೊಂದು ಕುತೂಹಲವೆಂದರೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಿಚಾ ಸಿಂಗ್ ಉಪಕುಲಪತಿ ಹಂಗ್ಲೂ ಬಿಜೆಪಿಯ ನಿಕಟವರ್ತಿಯಂತೆ ವರ್ತಿಸುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.