ಕೇರಳ ಪಾಮೋಲಿನ್ ಹಗರಣ: ಯಾರನ್ನೂ ಆರೋಪಮುಕ್ತಗೊಳಿಸಲು ಸಾಧ್ಯವಿಲ್ಲ, ತನಿಖೆ ಮುಂದುವರಿಯಲಿ- ಸುಪ್ರೀಂಕೋರ್ಟ್
ಹೊಸದಿಲ್ಲಿ, ಮೇ 11: ಕೇರಳದ ಪಾಮೋಲಿನ್ ಹಗರಣದ ವಿಚಾರಣೆಯನ್ನು ಮುಂದುವರಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಪ್ರಕರಣದಿಂದ ಈಗ ಯಾರನ್ನೂ ಆರೋಪ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಪಾಮೋಲಿನ್ ಪ್ರಕರಣದಿಂದ ತಮ್ಮನ್ನು ಕೈಬಿಡಬೇಕೆಂದು ಕೇರಳದ ಮಾಜಿ ಆಹಾರ ಸಚಿವ ಟಿಎಚ್ ಮುಸ್ತಫಾ, ಪಿ.ಜೆ. ಥಾಮಸ್, ಜಿಜಿ ಥಾಮ್ಸನ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯನ್ನು ಸುಪ್ರೀಂಕೋರ್ಟ್ ಪರಿಗಣಿಸಿದ್ದು ಪ್ರಕರಣವನ್ನು ಉದ್ದಕ್ಕೆಳೆಯುತ್ತಾ ಹೋಗಿ ಆರೋಪಿಗಳನ್ನು ರಕ್ಷಿಸಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ವತ್ತು ಎಲ್‌ಡಿಎಫ್ ನಾಯಕ ವಿಎಸ್ ಅಚ್ಯುತಾನಂದನ್‌ರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಹಾಗಿದ್ದರೆ ಪ್ರಕರಣದ ಈಗಿನ ಸ್ಥಿತಿಯೇನು ಎಂದು ಸರಕಾರದ ವಕೀಲರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ರಾಜ್ಯ ಸರಕಾರದ ವಕೀಲರು ಸರಕಾರ ನೀಡಿರುವ ಪರಾಮರ್ಶನಾ ಅರ್ಜಿ ಹೈಕೋರ್ಟ್‌ನ ಪರಿಗಣನೆಯಲ್ಲಿದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದರು. ಆದರೆ ದಾಖಲೆಗಳನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಇಂತಹ ಒಂದು ಅರ್ಜಿ ಹೈಕೋರ್ಟ್‌ನ ಪರಿಗಣನೆಯಲ್ಲಿಲ್ಲ ಎಂದು ಹೇಳಿತು. ವಕೀಲರು ಕೋರ್ಟ್‌ನ್ನು ತಪ್ಪುದಾರಿಗೆಳೆಯುತ್ತಿರುವುದೇ ಎಂದು ಮುಖ್ಯ ನ್ಯಾಯಾಧೀಶ ಟಿಎಸ್ ಠಾಕೂರ್ ಪ್ರಶ್ನಿಸಿದರು. ಆನಂತರ ಕೋರ್ಟ್ ತನಿಖೆಯ ಈ ಹಂತದಲ್ಲಿ ಯಾರನ್ನೂ ಆರೋಪ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತು ಎಂದು ವರದಿಯಾಗಿದೆ.