×
Ad

ವೃದ್ಧ ರಾಜಕಾರಣಿಗಳ ಅಧಿಕಾರದ ಚಪಲ

Update: 2016-05-12 23:44 IST

ವೃದ್ಧರಿಗೆ ಚಪಲ ಜಾಸ್ತಿ ಎಂಬ ಮಾತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದರ ಬಗ್ಗೆ ಅನುಮಾನಗಳಿವೆ. ಆದರೆ ಕಾಂಗ್ರೆಸ್ ಪಕ್ಷದೊಳಗಿರುವ ಕೆಲವು ಹಿರಿಯ ರಾಜಕಾರಣಿಗಳ ವರ್ತನೆ ನೋಡಿದರೆ, ರಾಜಕೀಯದಲ್ಲಂತೂ ಈ ಮಾತು ನೂರಕ್ಕೆ ನೂರು ಅನ್ವಯವಾಗುತ್ತದೆ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಮೂರು ವರ್ಷಗಳನ್ನು ಪೂರೈಸಿದೆ. ಈ ಸಂದರ್ಭವನ್ನು ಹೇಗೆ ಆಚರಿಸುವುದು ಎನ್ನುವುದರ ಕುರಿತಂತೆ ಕಾಂಗ್ರೆಸ್‌ನೊಳಗೇ ಗೊಂದಲಗಳಿವೆ. ಕಾಂಗ್ರೆಸ್‌ನ ಕೆಲ ಹಿರಿಯರು, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಇದನ್ನು ಆಚರಿಸಬೇಕು ಎಂದು ಒಳಗೊಳಗೇ ಬಯಸುತ್ತಿರುವುದು ಕಾಂಗ್ರೆಸ್‌ನ ಪಾಲಿನ ವ್ಯಂಗ್ಯವೂ ಆಗಿದೆ. ಕಾಂಗ್ರೆಸ್ ಇಂದಿಗೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದ್ದರೆ ಅದು ಸಿದ್ದರಾಮಯ್ಯ ಅವರ ಹೆಸರಿನ ಮೂಲಕ ಮಾತ್ರವೇ ಆಗಿದೆ. ಆದರೆ ಇದೀಗ ಈ ಮೂರು ವರ್ಷಗಳನ್ನು ಕಾಂಗ್ರೆಸ್‌ನ ಕೆಲ ಹಿರಿಯರು ನೂರು ವರ್ಷದ ಭಾರ ಹೊತ್ತಂತೆ ವರ್ತಿಸುತ್ತಿದ್ದಾರೆ. ಇಂದು ಕಾಂಗ್ರೆಸ್‌ನ ದಲಿತ ಮುಖ್ಯಮಂತ್ರಿಯ ಕೂಗನ್ನು ಹುಟ್ಟು ಹಾಕಿದ್ದು, ಇದೇ ಮನಸ್ಥಿತಿಯ ಹಿರಿಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಜಕ್ಕೂ ಇದು ಕಾಂಗ್ರೆಸ್‌ನೊಳಗಿನ ದಲಿತ ಪ್ರೀತಿಯ ಪ್ರತಿಬಿಂಬವಾಗಿದ್ದರೆ, ಅದೊಂದು ಆಶಾದಾಯಕ ಸಂಗತಿಯಾಗಿ ಬಿಡುತ್ತಿತ್ತು. ಕಾಂಗ್ರೆಸ್‌ನ ದುರಂತವೆಂದರೆ, ಎಸ್. ಎಂ. ಕೃಷ್ಣರಂತಹ ವೃದ್ಧರೂ ಇನ್ನೂ ಅಧಿಕಾರದ ಆಸೆ ಇಟ್ಟುಕೊಂಡು ಒಳಗೊಳಗೆ ಕಾಂಗ್ರೆಸ್ ಆಡಳಿತ ವಿರುದ್ಧ ಆಟವಾಡುತ್ತಿರುವುದು. ಬಹುಶಃ ಕಾಂಗ್ರೆಸ್ ಸರಕಾರ ಎಡವಿದ್ದರೆ, ಕಾರ್ಯಯೋಜನೆಗಳನ್ನು ತರುವಲ್ಲಿ ವಿಫಲವಾಗಿದ್ದರೆ ಅದರ ಹಿಂದೆ ಇಂತಹ ರಾಜಕಾರಣಿಗಳ ಕೊಡುಗೆ ಬಹುದೊಡ್ಡದು. ಕಾಂಗ್ರೆಸ್ ಭವಿಷ್ಯದಲ್ಲಿ ಅಧಿಕಾರ ಕಳೆದುಕೊಂಡರೂ ಪರವಾಗಿಲ್ಲ, ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಶಾಶ್ವತ ನಾಯಕರಾಗಿ ಉಳಿಯಬಾರದು ಎನ್ನುವುದೇ ಇವರ ಒಳಗಿನ ಆಸೆಯಾಗಿದೆ. ಅತ್ಯಂತ ತಮಾಷೆಯೆಂದರೆ, ಮಾಧ್ಯಮಗಳು ಇಂದು ಎಸ್. ಎಂ. ಕೃಷ್ಣರಂತಹ ವೃದ್ಧರನ್ನು ಸಿದ್ದರಾಮಯ್ಯ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಂಬಿಸಲು ಯತ್ನಿಸುತ್ತಿರುವುದು ಮತ್ತು ಅದನ್ನು ನಂಬಿ ಕೃಷ್ಣ ಅವರು ಒಳಗೊಳಗೆ ಸರಕಾರದ ವಿರುದ್ಧ ಪಿತೂರಿಗಳನ್ನು ನಡೆಸಲು ಹವಣಿಸುತ್ತಿರುವುದು. ದೇವರಾಜ ಅರಸು ಕಾಲದ ಆಳ್ವಿಕೆಯ ಬಳಿಕ, ಒಂದಿಷ್ಟು ತಳಸ್ತರದ ಮಟ್ಟದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ್ದು ಸಿದ್ದರಾಮಯ್ಯ ಕಾಲದಲ್ಲಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ನಾಡಿನ ಬಡವರು ಪಡೆದುಕೊಂಡದ್ದು ಏನು ಎನ್ನುವುದನ್ನು ನಾಡು ಮರೆತಿಲ್ಲ. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎನ್ನುವುದೇ ಕೃಷ್ಣ ಅವರ ಅಜೆಂಡಾ ಆಗಿತ್ತು. ಕರ್ನಾಟಕವೆಂದರೆ ಬೆಂಗಳೂರು ನಗರ ಎಂದು ಬಲವಾಗಿ ನಂಬಿ ಆಡಳಿತ ನಡೆಸಿದವರು ಕೃಷ್ಣ. ಐಟಿ ಕಂಪೆನಿಗಳಿಗೆ ಬಡವರ ಭೂಮಿಯನ್ನು ಧಾರೆಯೆರೆದ ಕೃಷ್ಣ ಅದನ್ನೇ ಅಭಿವೃದ್ಧಿಯೆಂದು ತಿಳಿದವರು. ಐಟಿ-ಬಿಟಿ ಕಂಪೆನಿಗಳ ಆಪ್ತಮಿತ್ರ ಕೃಷ್ಣ ಜೊತೆಗೆ ಮಾಧ್ಯಮಗಳು ನಿಂತ ಪರಿಣಾಮವಾಗಿ ನಂ. 1 ಮುಖ್ಯಮಂತ್ರಿ ಎಂದೂ ಬಿಂಬಿಸಲ್ಪಟ್ಟರು. ಸಾರ್ವಜನಿಕವಾಗಿ ಮಾಧ್ಯಮಗಳ ಜೊತೆಗೆ ಒಂದು ಸಾಲು ಕನ್ನಡವನ್ನೂ ಮಾತನಾಡಲು ಕೀಳರಿಮೆಯನ್ನು ಹೊಂದಿದ್ದ ಕೃಷ್ಣ ಅವರಿಗೆ ತಮ್ಮ ಅಧಿಕಾರದ ಕೊನೆಯವರೆಗೂ ಸಮಗ್ರ ಕರ್ನಾಟಕದ ತಳಸ್ತರದ ಬದುಕು ಅರ್ಥವಾಗಲೇ ಇಲ್ಲ. ಮಾಧ್ಯಮಗಳ ಮೂಲಕ ಜನಪ್ರಿಯ ಮುಖ್ಯಮಂತ್ರಿಯಾಗಿ ಬಿಂಬಿತಗೊಂಡ ಎಸ್. ಎಂ. ಕೃಷ್ಣ, ಯಾವುದೋ ಕೋನದಲ್ಲಿ ನರೇಂದ್ರ ಮೋದಿಯನ್ನು ಹೋಲುತ್ತಾರೆ. ಬಹುಶಃ ಕಾರ್ಪೊರೇಟ್ ವಲಯದ ಜೊತೆಗೆ ಮೋದಿಯವರು ಹೊಂದಿರುವ ಸಂಬಂಧ, ಕೃಷ್ಣ ಅವರಿಗೂ ಹೊಂದಿಕೆಯಾಗುತ್ತದೆ. ಮೋದಿ ಮತ್ತು ಕೃಷ್ಣ ಅವರ ಗ್ಲಾಮರ್‌ಗಳು ಈ ಹಿನ್ನೆಲೆಯಿಂದಲೇ ಬಂದಿರುವುದು. ಯುಪಿಎ ಸರಕಾರದಲ್ಲಿ ಕೃಷ್ಣ, ತನ್ನ ಈ ಗ್ಲಾಮರ್‌ಗಳ ಮೂಲಕವೇ ಸೋನಿಯಾ ಗಾಂಧಿಯನ್ನು ಸೆಳೆದರು. ಮತ್ತು ಸೋನಿಯಾಗಾಂಧಿ ಅವರನ್ನು ಸಂಪುಟಕ್ಕೆ ಸೇರಿಸಿದಷ್ಟೇ ವೇಗದಲ್ಲಿ ಕಿತ್ತು ಎಸೆದದ್ದೂ ಅಷ್ಟೇ ಸತ್ಯ. ವಿದೇಶಾಂಗ ಸಚಿವ ಸ್ಥಾನಕ್ಕೆ ಇಂಗ್ಲಿಷ್ ಬಲ್ಲ ಸೂತ್ರದ ಗೊಂಬೆ ಬೇಕಾಗಿತ್ತು ಎನ್ನುವುದು ಹೈಕಮಾಂಡ್ ಬೇಡಿಕೆಯಾಗಿತ್ತು. ಅದಕ್ಕೆ ಎಲ್ಲ ರೀತಿಯಲ್ಲೂ ಕೃಷ್ಣ ಸಲ್ಲುತ್ತಿದ್ದರು. ಆದರೆ ವಿದೇಶದಲ್ಲಿ, ಯಾವುದೋ ಭಾಷಣಕ್ಕೆ ಬದಲಿಗೆ ಇನ್ನಾವುದೋ ಭಾಷಣವನ್ನು ಓದಿ ನಗೆ ಪಾಟಲಿಗೀಡಾದರು. ಹಲವು ಬಾರಿ ಅವರು ತಮ್ಮ ನಡೆಗಳ ಮೂಲಕ ದೇಶಕ್ಕೆ ಮುಜುಗರ ಉಂಟು ಮಾಡಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಅಳಿಯನಿಗೊಂದು ನೆಲೆ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡ ಆರೋಪವೂ ಅವರ ಮೇಲೆ ಬಂತು. ಇದರಿಂದಾಗಿ ಅವರು ಸಚಿವ ಸ್ಥಾನವನ್ನು ಕಳೆದುಕೊಂಡರು. ಕೆಲ ಸಮಯ ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು. ಇರುವಷ್ಟು ದಿನ ಆ ಅಧಿಕಾರವನ್ನು ಚೆನ್ನಾಗಿ ಸವಿದ ಅವರು, ಕರ್ನಾಟಕದ ಹಿತಾಸಕ್ತಿಯ ಪ್ರಶ್ನೆ ಬಂದಾಗ ಮಹಾರಾಷ್ಟ್ರದ ಪರವಾಗಿಯೇ ನಿಂತರು. ಅಧಿಕಾರ ಮುಗಿಯುತ್ತಾ ಬಂದಂತೆ ಒಮ್ಮೆಗೇ ಕರ್ನಾಟಕ ರಾಜಕಾರಣದ ಮೇಲೆ ಅವರಿಗೆ ಪ್ರೀತಿ ಉಕ್ಕಿತು. ಆದರೆ ಅವರ ಯೋಜನೆಗಳು ಮಾತ್ರ ಫಲಿಸಲಿಲ್ಲ. ಅಷ್ಟರಲ್ಲೇ ಸಿದ್ದರಾಮಯ್ಯನವರ ಪ್ರವೇಶ, ಹೊದ್ದು ಮಲಗಿದ್ದ ಕಾಂಗ್ರೆಸ್‌ನೊಳಗೆ ಸಂಚಲನ ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಕಾಂಗ್ರೆಸ್ ಮೂರು ವರ್ಷ ಪೂರೈಸುತ್ತಿರುವಂತೆಯೇ, ಸರಕಾರದ ವಿರುದ್ಧ ಒಳಗೊಳಗೇ ತಮ್ಮ ಹಿಂಬಾಲಕರನ್ನು ಛೂ ಬಿಡುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಇದು ಎಸ್. ಎಂ. ಕೃಷ್ಣ ಅವರ ಅಧಿಕಾರದ ಚಪಲವನ್ನು ತೋರಿಸುತ್ತಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣ ನಿಷ್ಕ್ರಿಯವಾಗುತ್ತಿರುವ ಇಂತಹ ಹಿರಿಯ ನಾಯಕರಿಗೆ ಹೈಕಮಾಂಡ್ ಸಂಪೂರ್ಣ ನಿವೃತ್ತಿಯನ್ನು ಘೋಷಿಸದೇ ಇದ್ದರೆ, ಅವರು ತಮ್ಮ ಜೊತೆಗೆ ಕಾಂಗ್ರೆಸ್‌ನ್ನು ಸರ್ವನಾಶ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಮೂರು ವರ್ಷ ಪೂರೈಸಿರುವ ಕಾಂಗ್ರೆಸ್ ಸರಕಾರ, ಇನ್ನಷ್ಟು ಚೈತನ್ಯವನ್ನು ಪಡೆಯಬೇಕಾದರೆ, ಮೊತ್ತ ಮೊದಲು ಎಸ್. ಎಂ. ಕೃಷ್ಣರಂತಹ ಅಧಿಕಾರ ಕೇಂದ್ರಿತ ನಾಯಕರನ್ನು ದೂರವಿಟ್ಟು, ಅಂಬರೀಷ್‌ರಂತಹ ನಿಷ್ಕ್ರಿಯ, ನಿಷ್ಪ್ರಯೋಜಕ ರಾಜಕಾರಣಿಗಳನ್ನು ಸಂಪುಟದಿಂದ ಹೊರಹಾಕಿ, ಹೆಚ್ಚು ಚುರುಕಾಗಿ ಕೆಲಸ ಮಾಡಬಲ್ಲ ಸಮರ್ಥರನ್ನು ಸಿದ್ದರಾಮಯ್ಯ ಅವರಿಗೆ ಒದಗಿಸಿ ಕೊಡಬೇಕು. ಹಾಗೆಯೇ, ನೇರ, ನಿಷ್ಠುರ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನಷ್ಟು ಸ್ವಾತಂತ್ರ ನೀಡಬೇಕು. ಹಾಗಾದಲ್ಲಿ ಮಾತ್ರ, ಕಾಂಗ್ರೆಸ್ ತನ್ನ ಜನಪ್ರಿಯತೆಯನ್ನು ಮುಂದೆಯೂ ಉಳಿಸಿಕೊಂಡೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News