ಇತಿಹಾಸ ಸೇರಲಿದೆ ಪಂಚವಾರ್ಷಿಕ ಯೋಜನೆ
ಹೊಸದಿಲ್ಲಿ, ಮೇ 13: ನೆಹರೂ ಅವರ ಆರ್ಥಿಕ ನೀತಿಗಳ ಪಳೆಯುಳಿಕೆಯಾದ ಪಂಚವಾರ್ಷಿಕ ಯೋಜನೆ ಪದ್ಧತಿ ಶೀಘ್ರವೇ ಇತಿಹಾಸದ ಪುಟ ಸೇರಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪಂಚವಾರ್ಷಿಕ ಯೋಜನೆ ಮುಂದಿನ ಮಾರ್ಚ್ ವೇಳೆಗೆ ಕೊನೆಗೊಳ್ಳಲಿದ್ದು, ಬಳಿಕ 15 ವರ್ಷಗಳ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರದ ನರೇಂದ್ರ ಮೋದಿ ಸರಕಾರ ನಿರ್ಧರಿಸಿದೆ.
ಸಾಮಾಜಿಕ ಗುರಿಗಳು ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಈ ಬದಲಾವಣೆ ತರಲು ಮುಂದಾಗಿರುವುದಾಗಿ ಸರಕಾರ ಹೇಳಿದೆ.
’ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿ’ (ಎನ್‌ಡಿಎ) ಹೆಸರಿನ ಏಳು ವರ್ಷಗಳ ಕಾರ್ಯಸೂಚಿಯೊಂದನ್ನು ಮುಂದಿನ ಮಾರ್ಚ್‌ನಿಂದ ಜಾರಿಗೊಳಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ದೀರ್ಘಾವಧಿ ಗುರಿಗಳನ್ನು ಸಾಧಿಸಲು ಈ ಬದಲಾವಣೆ ತರಲಾಗುತ್ತಿದೆ ಎಂದು ಪ್ರಧಾನಿಯ ನಿಕಟವರ್ತಿ ಮೂಲಗಳು ತಿಳಿಸಿವೆ.
ಪಂಚವಾರ್ಷಿಕ ಯೋಜನೆಗಳಲ್ಲಿ ಕೇವಲ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಅಂಶಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದರೆ, ಈಗ ತರಲಾಗುತ್ತಿರುವ ದೀರ್ಘಾವಧಿ ಯೋಜನೆಗಳಲ್ಲಿ ರಕ್ಷಣೆ ಮತ್ತು ಆಂತರಿಕ ಭದ್ರತೆಯ ಅಂಶಗಳನ್ನೂ ಸೇರಿಸಲಾಗಿದೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ’ಎನ್‌ಡಿಎ’ಯನ್ನು ಮರು ವಿಮರ್ಶಿಸಲಾಗುತ್ತದೆ. 2019-20ರಲ್ಲಿ ಇಂತಹ ಮೊದಲ ಮಧ್ಯಾಂತರ ಪರಿಶೀಲನೆ ನಡೆಯಲಿದೆ.