ಕ್ಷಮೆ ಯಾಚಿಸಿ ಇಲ್ಲವೇ ಮೊಕದ್ದಮೆ ಎದುರಿಸಿ ಬಿಜೆಪಿಯ ಸೋಮೈಯಾಗೆ ರಾಹುಲ್ ಆಪ್ತನ ಎಚ್ಚರಿಕೆ
ಹೊಸದಿಲ್ಲಿ,ಮೇ 13: ಆಗಸ್ಟಾ ವೆಸ್ಟಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಾಗಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಮೊಕದ್ದಮೆಯನ್ನು ದಾಖಲಿಸುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ ಗಾಂಧಿಯವರ ಮುಖ್ಯ ಸಹಾಯಕ ಕನಿಷ್ಕಾ ಸಿಂಗ್ ಅವರು ಬಿಜೆಪಿ ಸಂಸದ ಕಿರೀಟ್ ಸೋಮೈಯಾ ಅವರಿಗೆ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಸಿಂಗ್ ತನ್ನ ಕುಟುಂಬದ ಮೂಲಕ ಆಗಸ್ಟಾ ಜೊತೆ ನಂಟು ಹೊಂದಿದ್ದರು ಎಂದು ಸೋಮೈಯಾ ಕಳೆದ ವಾರ ಸಂಸತ್ತಿನೊಳಗೆ ಮತ್ತು ಹೊರಗೆ ಆರೋಪಿಸಿದ್ದರು. ಸಿಂಗ್ ಬಂಧುಗಳ ಒಡೆತನದ ರಿಯಲ್ ಎಸ್ಟೇಟ್ ಸಂಸ್ಥೆ ಎಮ್ಮಾರ್-ಎಂಜಿಎಫ್ 2009ರಲ್ಲಿ ತನ್ನ ನಿರ್ದೇಶಕರ ಮಂಡಳಿಯಲ್ಲಿ ಆಗಸ್ಟಾ ಪರವಾಗಿ ಪ್ರಮುಖ ಮಧ್ಯವರ್ತಿಗಿಡೋ ಹಾಷ್ಕೆಯನ್ನು ನಿರ್ದೇಶಕನಾಗಿ ನೇಮಿಸಿಕೊಂಡಿತ್ತು ಮತ್ತು ಮರು ವರ್ಷ ಭಾರತವು ಆಗಸ್ಟಾದಿಂದ 12 ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು ಎಂದು ಸೋಮೈಯಾ ಹೇಳಿದ್ದರು.
ಎಮ್ಮಾರ್ ಕಂಪನಿಯ ಒಡೆತನ ಹೊಂದಿರುವ ತನ್ನ ಕುಟುಂಬದ ಶಾಖೆಯಿಂದ ತಾನು ದೂರವಾಗಿದ್ದೇನೆ ಎಂದು ಸಿಂಗ್ ಈ ಹಿಂದೆ ಹೇಳಿದ್ದರು. ಇಟಲಿ ಪ್ರಜೆ ಹಾಷ್ಕೆ ಎರಡು ತಿಂಗಳ ಅವಧಿಗೆ ನಿರ್ದೇಶಕನಾಗಿದ್ದರೂ ಕಂಪನಿಯ ಕಚೇರಿಗಳಿಗೆ ಭೇಟಿ ನೀಡಿರಲಿಲ್ಲ ಅಥವಾ ನಿರ್ದೇಶಕರ ಮಂಡಳಿಯ ಸಭೆಗಳಿಗೆ ಹಾಜರಾಗಿರಲಿಲ್ಲ ಎಂದು ಕಂಪನಿಯು ಕೂಡ ವಿವರವಾದ ಹೇಳಿಕೆಯಲ್ಲಿ ತಿಳಿಸಿತ್ತು.
ಹಾಷ್ಕೆ 2010ರಲ್ಲಿ ಭಾರತಕ್ಕೆ 12 ವಿವಿಐಪಿ ಹೆಲಿಕಾಪ್ಟರ್‌ಗಳ ಮಾರಾಟಕ್ಕಾಗಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಲಂಚ ಪಾವತಿಸಿತ್ತು ಎನ್ನುವುದನ್ನು ಕಳೆದ ತಿಂಗಳು ರುಜುವಾತು ಮಾಡಿರುವ ತನಿಖಾ ತಂಡಕ್ಕೆ ಮಾಫಿ ಸಾಕ್ಷಿದಾರನಾಗಿ ಸಹಕರಿಸಿದ್ದ.