ಸಮಾಜದ ಸಿದ್ಧಸೂತ್ರಗಳನ್ನು ಒಡೆಯದ ‘ತಿಥಿ’

Update: 2016-05-14 17:52 GMT

ನೀವು ವಿದೇಶಿ ಭಾಷೆಯ ಅದರಲ್ಲೂ ಇರಾನಿ ಸಿನೆಮಾಗಳನ್ನು ನೋಡುವವರಾಗಿದ್ದರೆ ಕನ್ನಡದ ‘ತಿಥಿ’ ಸಿನೆಮಾ ಇರಾನಿ ಸಿನೆಮಾದಂತೆಯೇ ಇದೆ ಎನ್ನುವ ಭಾವನೆ ಆಗಾಗ ಮೂಡುತ್ತಲೇ ಇರುತ್ತದೆ. ನೈಜತೆಗೆ ಹತ್ತಿರವಾಗಿ ತೆಗೆಯುವ ಪ್ರಯತ್ನ, ಪರಿಸರದಲ್ಲಿನ ಶಬ್ದಗಳನ್ನಷ್ಟೇ ಸಂಗೀತವಾಗಿ ಉಪಯೋಗಿಸಿರುವ ಪರಿಯೆಲ್ಲವೂ ಇರಾನಿ ಸಿನೆಮಾವನ್ನು ನೆನಪಿಸುತ್ತದೆ. ಆದರೆ ಇರಾನಿ ಸಿನೆಮಾಗಳಿಗಿರುವ ಒಂದು ಅನುಕೂಲ ತಿಥಿಗೆ ಇಲ್ಲವಾಗಿದೆ! ಇರಾನಿ ಸಿನೆಮಾದ ಪಾತ್ರಗಳ ಜಾತಿ, ಉಪಜಾತಿಯ ಬಗ್ಗೆ ನಮಗೆ ಅಷ್ಟು ಜ್ಞಾನವಿರುವುದಿಲ್ಲವಾದ್ದರಿಂದ ಸಿನೆಮಾವನ್ನು ಸಿನೆಮಾವಾಗಿ ವೀಕ್ಷಿಸಿ ಅನುಭವಿಸಿ ಎದ್ದುಬಂದುಬಿಡಬಹುದು. ಆದರೆ ನಮ್ಮದೇ ಕರ್ನಾಟಕದ ಮಂಡ್ಯದ ಹಳ್ಳಿ ನೊದೆಕೊಪ್ಪಲಿನಲ್ಲಿ ಚಿತ್ರಿತವಾದ ‘ತಿಥಿ’ಯಲ್ಲಿನ ಪಾತ್ರಗಳ ಜಾತಿಯೆಲ್ಲವೂ ನಮಗೆ ತಿಳಿದುಬಿಡುವುದರಿಂದ ಅಲ್ಲಲ್ಲಿ ತೋರುವ ಜಾತೀಯತೆ ಸಿನೆಮಾದ ಆಹ್ಲಾದವನ್ನು ಕಡಿಮೆ ಮಾಡಿಬಿಡುತ್ತದೆ. ತೆರೆಗೆ ಬರುವ ಮುನ್ನ ‘ತಿಥಿ’ ಚಿತ್ರ ಬೆಂಗಳೂರಿನ ಅಂತಾರಾಷ್ಟ್ರೀಯ ಸಿನೆಮಾ ಉತ್ಸವವನ್ನೂ ಸೇರಿದಂತೆ ಅನೇಕ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು, ಅನೇಕ ಪ್ರಶಸ್ತಿಗಳನ್ನೂ ಗೆದ್ದಿತ್ತು. ಚಿತ್ರದ ಬಿಡುಗಡೆಯ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೋಡುಗರ ಪ್ರತಿಕ್ರಿಯೆಗಳೇನೇ ಇರಲಿ, ಅವಾರ್ಡು ಸಿನೆಮಾವೊಂದು ಜನರನ್ನು ಚಿತ್ರಮಂದಿರಗಳೆಡೆಗೆ ಸೆಳೆಯುತ್ತಿದೆಯೆನ್ನುವುದು (ಹೆಚ್ಚು ತೆರೆಕಂಡಿರುವುದು ಬೆಂಗಳೂರಿನಲ್ಲಿ) ಸಂತಸದ ಸಂಗತಿಯೇ. ಅಷ್ಟರಮಟ್ಟಿಗೆ ಜನರಿಗೆ ತಲುಪುವಂತೆ ಮಾಡಿದ ಚಿತ್ರತಂಡಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕು.

ಮೊದಲ ದೃಶ್ಯದ ನಂತರವೇ ಸತ್ತು ಹೋಗುವ ಸೆಂಚುರಿಗೌಡನ ಮಗ ಗಡ್ಡಪ್ಪ, ಗಡ್ಡಪ್ಪನ ಮಗ ತಮ್ಮಯ್ಯ, ತಮ್ಮಯ್ಯನ ಮಗ ಅಭಿಯ ಸುತ್ತ ಚಿತ್ರದ ಕತೆ ಸಾಗುತ್ತದೆ. ಸೆಂಚುರಿ ಗೌಡನ ಸಾವು ಮತ್ತವನ ತಿಥಿ ಕಾರ್ಯದ ನಡುವಿನ ಹತ್ತು ದಿನಗಳ ಕತೆಯಿದು. ಸೆಂಚುರಿ ಗೌಡ ತದನಂತರದ ದೃಶ್ಯಗಳಲ್ಲಿ ತಿಳಿಸಿದಂತೆ ಹೆಣ್ಣಿನ ಸಂಗವನ್ನು ಚಟವಾಗಿಸಿಕೊಂಡವನು. ಇನ್ನವನ ಮಗ ಗಡ್ಡಪ್ಪ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ಥಿತಪ್ರಜ್ಞ. ತಮ್ಮಯ್ಯ ಹಣ ಸಂಪತ್ತಿನ ಬೆಂಬತ್ತಿದರೆ ಹದಿಹರೆಯದ ಅಭಿಗೆ ಕುಡಿತ, ಜೂಜು, ಮತ್ತು ಇಷ್ಟವಾಗುವ ಕುರಿ ಕಾಯುವ ಹುಡುಗಿ ಕಾವೇರಿಯೊಡನೆ ಸರಸವಾಡುವ ಹಂಬಲ. ಈ ನಾಲ್ವರಲ್ಲಿ ಚಿತ್ರದ ನಾಯಕನೆಂದು ಯಾರನ್ನಾದರೂ ಕರೆಯಬಹುದಾದರೆ ಅದು ಗಡ್ಡಪ್ಪ. ಗಡ್ಡಪ್ಪಅಲೆಮಾರಿ ಪ್ರವೃತ್ತಿಯವನು. ಬೆಳಗ್ಗೆ ಅಲೆಯಲು ಹೋದರೆ ಸಂಜೆಗೋ ರಾತ್ರಿಗೋ ಮನೆ ಸೇರುವವನು. ಅಪ್ಪಸತ್ತಾಗಲೂ ‘ಸರಿ ಬಿಡು’ ಎಂದು ಹೇಳಿಬಿಡುವ ಗಡ್ಡಪ್ಪನ ವ್ಯಕ್ತಿತ್ವವನ್ನು ಮೊದಲರ್ಧದಲ್ಲಿ ನಮ್ಮನುಕೂಲಕ್ಕೆ ತಕ್ಕಂತೆ ಅನುಭಾವ ಎಂದೂ ಕರೆದುಬಿಡಬಹುದು, ಬೇಜವಾಬ್ಧ್ದಾರಿತನ ಎಂದೂ ಹೆಸರಿಸಬಹುದು. ಬೇಜವಾಬ್ಧ್ದಾರಿತನವಲ್ಲ ಅನುಭಾವ ಎನ್ನುವುದರಿವಿಗೆ ಬರುವುದು ಎರಡನೆ ಅರ್ಧದಲ್ಲಿ ಗಡ್ಡಪ್ಪ ಕುರುಬರಟ್ಟಿಯಲ್ಲಿ ತನ್ನಪ್ಪನೇ ತನ್ನ ಹೆಂಡತಿಯೊಂದಿಗೆ ಸಂಬಂಧ ಹೊಂದಿದ್ದ ಸಂಗತಿಯನ್ನು ವಿವರಿಸಿದಾಗ. ಗದ್ದೆಯಲ್ಲಿ ಅಪ್ಪಸೊಸೆಯ ಸರಸ ನೋಡಿದ ಮೇಲೆ ಗಡ್ಡಪ್ಪಏನೊಂದೂ ಮಾತನಾಡುವುದಿಲ್ಲ. ಮೌನವಾಗೇ ಇದ್ದುಬಿಡುತ್ತಾನೆ. ಆ ಮೌನವೇ ಕಾಡಿದ ಕಾರಣ ಅವನ ಹೆಂಡತಿ ತನ್ನಿಬ್ಬರು ಮಕ್ಕಳನ್ನೂ ಬಾವಿಗೆ ನೂಕಿ ತಾನೂ ಹಾರಿ ಬಿಡುತ್ತಾಳೆ. ಒಬ್ಬ ಮಗನನ್ನು ಉಳಿಸಿಕೊಳ್ಳಲಾಗುತ್ತದೆ, ಅವನೇ ತಮ್ಮಯ್ಯ. ಅನೈತಿಕ ಸಂಬಂಧವೊಂದು ಜಾಹೀರಾದಾಗ ಪಾಪ ಪ್ರಜ್ಞೆ ಕಾಡಿದ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ಆ ಅನೈತಿಕ ಸಂಬಂಧದಲ್ಲಿ ಭಾಗಿಯಾಗಿದ್ದ ಗಂಡು ಸೆಂಚುರಿ ಗೌಡನಾಗಿ ಭಾಳಾ ರಸಿಕನಿದ್ದ ಕಣಯ್ಯ 
ಎಂದು ಹೊಗಳಿಕೆಗೆ ಒಳಗಾಗುತ್ತಾನೆ! ಗಡ್ಡಪ್ಪನಿಗೆ ಸೆಂಚುರಿ ಗೌಡನ ಸಾವು ಕಾಡದೇ ಇರುವುದಕ್ಕೆ ತಿರಸ್ಕಾರ ಮುಖ್ಯ ಕಾರಣವೇ ಹೊರತು ಅನುಭಾವವೂ ಅಲ್ಲ, ಬೇಜವಾಬ್ದಾರಿತನವೂ ಅಲ್ಲ! ತಮ್ಮಯ್ಯ ಇರುವ ಜಮೀನು ಮಾರಿ ಒಂದಷ್ಟು ದುಡ್ಡು ಮಾಡಿಕೊಳ್ಳುವ ಸಲುವಾಗಿ ಖಾತೆಯನ್ನು ತನ್ನ ಹೆಸರಿಗೆ ವರ್ಗ ಮಾಡಿಸಲು ಗಡ್ಡಪ್ಪನ ಬೆನ್ನು ಬೀಳುತ್ತಾನೆ, ಗಡ್ಡಪ್ಪಎಲ್ಲಿಗೂ ಬರುವುದಿಲ್ಲವೆಂದು ಕೈಚೆಲ್ಲಿದ ಮೇಲೆ ಗಡ್ಡಪ್ಪಸತ್ತು ಹೋದ ಎಂದು ನಕಲಿ ಮರಣ ಪತ್ರ ತಯಾರಿಸಿ ಜಮೀನು ಮಾರಲೊರಡುತ್ತಾನೆ. ಇನ್ನು ಅಭಿ ಹುಬ್ಬಳ್ಳಿ ಕಡೆಯಿಂದ ಬಂದಿದ್ದ ಕುರುಬರ ಹುಡುಗಿ ಕಾವೇರಿಯ ಬೆನ್ನು ಬಿದ್ದು ಅವಳನ್ನೊಲಿಸಿಕೊಂಡು ತಾತನ ತಿಥಿಯ ಜೊತೆಗೇ ಅವಳೊಡನೆ ಕೂಡುತ್ತಾನೆ. ಅಪ್ಪನ ದುಡ್ಡು ಕದ್ದು ಜೂಜಾಡುವ, ಇಷ್ಟಪಟ್ಟ ಹುಡುಗಿಯ ಕುರಿಮಂದೆಯಿಂದಲೇ ಕುರಿ ಕದಿಯುವ ಅಭಿ ಮತ್ತವನ ಗೆಳೆಯರು ಯಾವುದೋ ದಾರಿಯಿಂದ ದುಡ್ಡು ಮಾಡಿದರೆ ಸರಿ ಎನ್ನುವ ಮನೋಭಾವದವರು. ಹಾಗೆ ನೋಡಿದರೆ ಇಡೀ ಚಿತ್ರದಲ್ಲಿ ಬೇಜವಾಬ್ದಾರಿ ಮನುಷ್ಯ ಎಂದು ತೋರುವ ಗಡ್ಡಪ್ಪನಿಗಿಂತ ತಮ್ಮಯ್ಯ ಮತ್ತು ಅಭಿಯೇ ಬೇಜವಾಬ್ದಾರಿ ವ್ಯಕ್ತಿತ್ವದವರು! ಗಡ್ಡಪ್ಪ ಮೇಕೆ ಸಾಕಿ ಗದ್ದೆ ನೋಡಿಕೊಂಡು ಸಂಸಾರ ಸಾಕಿದ, ತಮ್ಮಯ್ಯ ಜಮೀನು ಮಾರಿ ದುಡ್ಡು ಮಾಡಿಕೊಂಡು ನೆಲೆ ಕಂಡುಕೊಳ್ಳುವ ಯತ್ನ ಮಾಡುತ್ತಿದ್ದರೆ ತಮ್ಮಯ್ಯನ ಮಗ ಅಭಿ ಮರಳು ಕದ್ದೋ ಕಾಡಿನ ಮರ ಕದ್ದೋ ದುಡ್ಡೆಣಿಸುವ ಕೆಲಸ ಮಾಡುತ್ತಿದ್ದ!

ಹನ್ನೊಂದು ದಿನಗಳ ಘಟನೆಯನ್ನು ಕತೆಯಾಗಿ ತೋರಿಸದೇ ಘಟನೆಯಾ ಗಿಯೇ ತೋರಿಸಿದ ತಿಥಿ ಚೆನ್ನಾಗಿ ದೆಯೇ? ಹೇಳುವುದು ಕಷ್ಟ. ಇದು ಸಿದ್ಧಸೂತ್ರದ ಸಿನೆಮಾವಲ್ಲ. ಅವಾರ್ಡು ಸಿನೆಮಾಗಳ ಸೂತ್ರವನ್ನೂ ಇದು ಪಾಲಿಸಿಲ್ಲ ಎನ್ನುವುದು ಹೆಗ್ಗಳಿಕೆಯೂ ಆಗಬಹುದು, ತೆಗಳಿಕೆಯೂ ಆಗಬಹುದು. ಕನ್ನಡದ ಮಟ್ಟಿಗೆ ಸಿನೆಮಾ ಸೂತ್ರಗಳನ್ನು ಒಡೆಯಲೆತ್ನಿಸಿ ಹೊಸ ಅಲೆಯ ಸಿನೆಮಾದಂತೆ ಕಾಣುವ ತಿಥಿ ಸಮಾಜದ ಸಿದ್ಧಸೂತ್ರಗಳನ್ನು ಪ್ರಶ್ನಿಸುವ ಕೆಲಸವನ್ನೂ ಮಾಡಿಲ್ಲ, ಗಡ್ಡಪ್ಪಸಾವಿನ ನಂತರದ ಆಚರಣೆಗಳ ಬಗ್ಗೆ ಹೇಳುವ ಒಂದು ಸಂಭಾಷಣೆಯ ತುಣುಕನ್ನು ಹೊರತುಪಡಿಸಿ. ಊಳಿಗಮಾನ್ಯತೆಯನ್ನೇ ಹಾಸು ಹೊದ್ದಿರುವ ಮಂಡ್ಯದ ಹಳ್ಳಿಯದು. ಬ್ಯಾಂಡು ಬಾರಿಸುವ ದಲಿತರನ್ನು ‘ಬಾರಿಸಾಯ್ತಲ್ಲ ಅತ್ತಾಗೋಗಿ’ ಎನ್ನುವ ದೃಶ್ಯ ಜಾತೀಯತೆಯ, ಗೌಡರ ದುರಹಂಕಾರದ ನೈಜ ದರ್ಶನವೇನೋ ಹೌದು. ಆದರೆ ಸಿನೆಮಾವೊಂದರಲ್ಲಿ ಸಮಾಜದ ಅನಿಷ್ಟಗಳನ್ನು ಪ್ರಶ್ನಿಸುವ, ವಿಮರ್ಶಿಸುವ ಯಾವ ಭಾವವೂ ಇಲ್ಲದೇ ಹೋದರೆ ಅದು ಹೊಸ ಅಲೆಯ ಸಿನೆಮಾ ಆಗುವುದು ಹೇಗೆ? ಇನ್ನು ಜೋಯಿಸ್ರು ‘‘ನೀವು ಗೌಡರಾದ್ದರಿಂದ ತಿಥಿಗೆ ಮಾಂಸ ಮಾಡಿಸಬೇಕು, ಹೆಚ್ಚು ಜನರನ್ನು ಕರೆಯಬೇಕು’’ ಎಂದು ಹೇಳುವುದು ಮೇಲು ಕೀಳಿನ ಭಾವನೆ ತುಂಬಿ ಜಾತಿ ವ್ಯವಸ್ಥೆಯನ್ನು ಬಲಪಡಿಸುವ ಪುರೋಹಿತಶಾಹಿ ಮನಸ್ಥಿತಿಯ ಪ್ರತೀಕ. ಹಣವಿಲ್ಲದಿದ್ದರೂ ಸಾಲ ಮಾಡಿ ತಿಥಿ ಮಾಡುವ ತಮ್ಮಯ್ಯ, ಜೂಜಾಡಿ ಹಣ ಕಳೆಯುವ ಅಭಿ ಮಂಡ್ಯದ ಕೆಲವು ಕುಟುಂಬಗಳ ಸರ್ವನಾಶದ ಕಾರಣಗಳನ್ನು ತಿಳಿಸಿಕೊಡುತ್ತಾರೆ. ‘ತಿಥಿ’ ಚಿತ್ರದ ಕುರಿತು ಬಂದ ಸುದ್ದಿ, ವಿಮರ್ಶೆಗಳಲ್ಲೆಲ್ಲ ವೃತ್ತಿ ನಿರತ ಕಲಾವಿದರಿದರಲ್ಲಿಲ್ಲ, ಊರಿನವರೇ ಅಭಿನಯಿಸಿದ್ದಾರೆ, ಸಹಜಾಭಿನಯ ಎಂದು ಒಂದಷ್ಟು ಹೆಚ್ಚಾಗಿಯೇ ಹೊಗಳಿದ್ದರು. ಹಾಗೆ ನೋಡಿದರೆ ಇಡೀ ಚಿತ್ರದ ನಕಾರಾತ್ಮಕ ಅಂಶವೇ ಚಿತ್ರದಲ್ಲಿರುವವರ ಅಭಿನಯ. ಸಹಜ ಅಭಿನಯವೆಂದರೆ ವೃತ್ತಿ ನಿರತ ಕಲಾವಿದರನ್ನು ಬಳಸಿಕೊಂಡು ಅವರಿಂದ ನೈಜತೆಗೆ ಹತ್ತಿರವಾದ ಅಭಿನಯವನ್ನು ತೆಗೆಸುವುದು. ಅಭಿನಯದ ಕುರಿತು ಏನೂ ಗೊತ್ತಿಲ್ಲದೇ ಇರುವವರನ್ನು ಚಿತ್ರದಲ್ಲುಪಯೋಗಿಸಿದ ಮಾತ್ರಕ್ಕೆ ಅದು ಸಹಜಾಭಿನಯವಾಗಿಬಿಡುವುದಿಲ್ಲ. ಗಡ್ಡಪ್ಪನ ಅಭಿನಯ ಮನಸ್ಸಲ್ಲುಳಿಯುತ್ತದೆ; ಉಳಿದ ಮುಖ್ಯಪಾತ್ರಧಾರಿಗಳ ಅಭಿನಯದ ಬಗ್ಗೆ ಇದೇ ಮಾತನ್ನು ಹೇಳುವುದು ಕಷ್ಟ. ನೈಜತೆಯ ಚಿತ್ರದಲ್ಲಿ ಪರದೆಯ ಮೇಲೆ ಮೂಡುವ ಎಲ್ಲರ ಅಭಿನಯವೂ ಸಹಜವಾಗಿರಬೇಕು. ಅದಿಲ್ಲಿ ಮಾಯವಾಗಿದೆ. ಅನೇಕ ಸಹಪಾತ್ರಗಳ ಸಂಭಾಷಣೆ ಹೇಳುವ ಶೈಲಿ ಕಂಠಪಾಠ ಮಾಡಿ ಒಪ್ಪಿಸಿದಂತಿದೆಯೇ ಹೊರತು ಸಹಜತೆಗೆ ಹತ್ತಿರದಲ್ಲೂ ಇಲ್ಲ. ಅಭಿನಯ ಸಹಜವಲ್ಲವಾದ್ದರಿಂದ ಕಲಾವಿದರಲ್ಲದವರು ಅಭಿನಯಿಸುವುದೇ ಅಸಹಜವಾಗಿಬಿಡುತ್ತದೆಯಲ್ಲವೇ? ಸಹಜಾಭಿನಯ ನಟನೆಯ ಎಬಿಸಿಡಿ ಗೊತ್ತಿರುವವರೇ ಚೆನ್ನಾಗಿ ಮಾಡುತ್ತಾರೆ ಎಂಬ ಭಾವನೆ ಚಿತ್ರ ನೋಡಿದ ಮೇಲೆ ಮೂಡುತ್ತದೆ. ಹಳ್ಳಿಯ ಪರಿಸರದ ನೈಜತೆಯ ಸಿನೆಮಾ ಎಂದು ಹೊಗಳಿಸಿಕೊಂಡ ಸಿನೆಮಾದಲ್ಲಿ ಅಚ್ಚರಿ ಮೂಡಿಸುವುದು ಸೆಂಚುರಿ ಗೌಡ ಸತ್ತಾಗ ಒಬ್ಬರ ಕಣ್ಣಲ್ಲೂ ನೀರಾಡದೆ ಇರುವುದು, ಯಾರೊಬ್ಬರೂ ಎದೆ ಬಡಿದುಕೊಂಡು ‘ಹೋಗ್ಬಿಟ್ಯಲ್ಲೋ’ ಎಂದು ಕೂಗದೇ ಇರುವುದು! ಮಂಡ್ಯದ ಕಡೆ ಸಾಮಾನ್ಯವಾಗಿ ಕಂಡುಬರುವ ಈ ದೃಶ್ಯ ಅದು ಹೇಗೆ ಚಿತ್ರದಲ್ಲಿ ಬರಲೇ ಇಲ್ಲವೋ ಅಚ್ಚರಿಯಾಗುತ್ತದೆ. ಇಡೀ ಸಿನೆಮಾಕ್ಕೊಂದು ಉಡಾಫೆಯ, ಹಾಸ್ಯದ ಲೇಪನ ಕೊಡುವ ಸಲುವಾಗಿ ಇದನ್ನು ಉದ್ದೇಶಪೂರ್ವಕವಾಗಿ ಮರೆತುಬಿಡಲಾಯಿತಾ?
ಮಾತಿನ ಮೂಲಕವೇ ಕತೆ ಹೆಚ್ಚು ಸಾಗುವುದರಿಂದ, ಸಂಕೇತಗಳು - ಪ್ರತಿಮೆಗಳ ಸಂಖ್ಯೆ ಕಡಿಮೆಯಿರುವುದರಿಂದ ಛಾಯಾಗ್ರಹಣಕ್ಕೆ ಹೇಳಿಕೊಳ್ಳುವಂತಹ ಪ್ರಾಮುಖ್ಯತೆಯೂ ಇಲ್ಲ. ನೈಜ ಶಬ್ದಗಳನ್ನುಪಯೋಗಿಸುವ ಪ್ರಯೋಗವನ್ನು ಮಾಡಿರುವುದರಿಂದ ಸಂಗೀತವಿಲ್ಲ. ಏನೇ ಹೇಳಿ ಚಿತ್ರವೊಂದನ್ನು ನೋಡುವಾಗ ಒಂದು ಮೂಡು ಸೃಷ್ಟಿಸಲು ಸಂಗೀತವಿದ್ದರೇ ಚೆಂದ! ಚಿತ್ರ ನೋಡಿ ಮುಗಿಸಿದ ಮೇಲೆ ಕಾಡುವ ಅಂಶಗಳ್ಯಾವುವು ಎಂದು ಪಟ್ಟಿ ಮಾಡಿದರೆ ಗಡ್ಡಪ್ಪನ ಹೊರತು ಹೆಚ್ಚೇನೂ ನೆನಪಾಗುವುದಿಲ್ಲ. ಸಿನಿಮಾ ಹೊಸ ಅಲೆಯದೇ ಇರಬಹುದು, ಅಲೆ ಎಲ್ಲರಿಗೂ ತಾಕುವುದಿಲ್ಲ.
ಸಿನೆಮಾಕ್ಕೆ ಸಿಕ್ಕ ಅತಿಯಾದ ಹೊಗಳಿಕೆ ಚಿತ್ರ ನೋಡುವುದಕ್ಕೆ ಮುಂಚೆ ಒಂದು ನಿರೀಕ್ಷೆಯನ್ನು ಹುಟ್ಟಿಸಿತ್ತು. ಬಹುಶಃ ಈ ನಿರೀಕ್ಷೆಯೂ ಸಿನೆಮಾ ಹೇಳಿಕೊಳ್ಳುವಂತಿಲ್ಲ ಎನ್ನುವ ಭಾವನೆ ಮೂಡಲು ಕಾರಣವಾಗಿರಬೇಕು.

Writer - ಡಾ. ಅಶೋಕ್. ಕೆ. ಆರ್.

contributor

Editor - ಡಾ. ಅಶೋಕ್. ಕೆ. ಆರ್.

contributor

Similar News