×
Ad

30 ಕೋಟಿ ರೂ. ಲಂಚದ ಬೇಡಿಕೆ: ಮಹಾರಾಷ್ಟ್ರ ಸಚಿವರ ‘ಆಪ್ತ ಸಹಾಯಕನ’ ಬಂಧನ

Update: 2016-05-14 23:48 IST

ಮುಂಬೈ, ಮೇ 14: ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ ಖಡ್ಸೆಯವರ ಆಪ್ತ ಸಹಾಯಕನೆಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬನನ್ನು ಭೂ ಮಂಜೂರಾತಿಯ ವಿಚಾರವಾಗಿ ರೂ. 30 ಕೋಟಿ ಲಂಚದ ಬೇಡಿಕೆಯಿಟ್ಟ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಂಧಿಸಿದೆ. ಗಜಾನ ಪಾಟೀಲ್ ಎಂಬ ಆ ವ್ಯಕ್ತಿಯನ್ನು ನಿನ್ನೆ ಬಂಧಿಸಲಾಗಿದೆ.

ದೂರುದಾರ, ಆರ್ಥಿಕಜ್ಞ ರಮೇಶ್ ಜಾಧವ್ ಎಂಬವರು ಖಡ್ಸೆಯವರ ಕಚೇರಿಯಿಂದ ನಿರಾಕ್ಷೇಪ ಪತ್ರವೊಂದನ್ನು(ಎನ್‌ಒಸಿ) ಬಯಸಿದ್ದರು. ಅದಕ್ಕಾಗಿ ಪಾಟೀಲ್ ಲಂಚದ ಬೇಡಿಕೆಯಿಟ್ಟಿದ್ದನು.

ಠಾಣೆ ಜಿಲ್ಲೆಯ ಕಲ್ಯಾಣ್ ತಾಲೂಕಿನ ನಿಲ್ಜೆ ಗ್ರಾಮದ ಕಂದಾಯ ಭೂಮಿಯೊಂದರ ಮಂಜೂರಾತಿಗೆ ಸಂಬಂಧಿಸಿ ಹಿಂದಿನ ಸರಕಾರದ ಆದೇಶವನ್ನು ಮರು ವಿಮರ್ಶಿಸುವಂತೆ ಕೋರಿ ಜಾಧವ್, ಸಚಿವ ಖಡ್ಸೆಯವರ ಖಚೇರಿಗೆ ಹೋಗಿದ್ದರು. ಪಾಟೀಲ್ ಅವರಿಂದ ರೂ. 30 ಕೋಟಿ ಕೇಳಿದನೆಂದು ಅಜ್ಞಾತವಾಗುಳಿಯ ಬಯಸಿರುವ ರಾಜ್ಯದ ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2004ರಲ್ಲಿ ನಿಲ್ಜೆಯಲ್ಲಿ 37 ಹೆಕ್ಟೇರ್ ಸ್ಥಳದಲ್ಲಿ ಇಂಟರ್ನ್ಯಾಶನಲ್ ಸೊಸೈಟಿ ಫಾರ್ ಎಕ್ಸಲೆನ್ಸ್ ಎಂಬ ಸಾಮಾಜಿಕ ಮತ್ತು ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಲಾಗಿತ್ತು. ಈ ಸಂಸ್ಥೆಯ ವಿಶ್ವಸ್ತರಾಗಿರುವ ರಮೇಶ್ ಜಾಧವ್, ಈ ಸಂಬಂಧ ಎನ್‌ಒಸಿ ಪಡೆಯುವುದಕ್ಕಾಗಿ ಪಾಟೀಲ್‌ನ ಸಂಪರ್ಕದಲ್ಲಿದ್ದರು. ಮಹಾರಾಷ್ಟ್ರ ಮಂತ್ರಾಲಯದಲ್ಲಿ ನಡೆದಿದ್ದ ಬೆಂಕಿ ಅಪಘಾತದಲ್ಲಿ ಭೂ ವ್ಯವಹಾರದ ಮೂಲ ದಾಖಲೆಗಳು ಸುಟ್ಟು ಹೋಗಿದ್ದವೆಂದು ಅವರು ಹೇಳಿದ್ದಾರೆ.

ಇದೇ ವೇಳೆ, ಖಡ್ಸೆ ಈ ವಿವಾದದಿಂದ ಅಂತರ ಕಾಪಾಡಿಕೊಂಡಿದ್ದು, ಪಾಟೀಲ್, ಜಲಗಾಂವ್‌ನ ತನ್ನ ಕ್ಷೇತ್ರವಾಗಿರುವ ಮುಕ್ತಾಯ್ನಗರ್‌ನ ಕೇವಲ ಒಬ್ಬ ಕಾರ್ಯಕರ್ತನಾಗಿದ್ದು, ಅಧಿಕೃತವಾಗಿ ಅಥವಾ ಖಾಸಗಿ ನೆಲೆಯಲ್ಲಿ ತನ್ನ ಕಚೇರಿಯಿಂದ ನೇಮಿಸಲ್ಪಟ್ಟವನಲ್ಲ. ಆತ ತನ್ನ ಹೆಸರನ್ನು ದುರ್ಬಳಕೆ ಮಾಡಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಪಾಟೀಲ್ ತನ್ನ ಕ್ಷೇತ್ರದ ನಿವಾಸಿಯಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಜಲಗಾಂವ್‌ನಿಂದ ಮುಂಬೈಗೆ ಜನರನ್ನು ಕರೆತರುತ್ತಿರುತ್ತಾನೆ. ಹೀಗೆ ತನಗೆ ಆತನ ಪರಿಚಯವಿದೆಯೆಂದು ತಿಳಿಸಿದ್ದಾರೆ. ಪ್ರಶ್ನೆಯಲ್ಲಿರುವ ಜಮೀನು 2014ರ ಮಾ.29ಕ್ಕೆ, ವಾಹನ ತಪಾಸಣೆ ಕೇಂದ್ರವೊಂದಕ್ಕಾಗಿ ರಾಜ್ಯದ ಸಾರಿಗೆ ಇಲಾಖೆಗೆ ಮಂಜೂರಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News